
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲಾ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಆಗಿ ಯಡಿಯೂರಪ್ಪ ಅವರ ಕಾರ್ಯವೈಖರಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿರುವ ಆರ್. ಅಶೋಕ್, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಯಾವುದೇ ಸವಾಲುಗಳು ಇರಲಿಲ್ಲ. ಆದರೆ, ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಲೆಲ್ಲಾ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ ಎಂದರು.
ಪ್ರವಾಹದ ಸಂದರ್ಭದಲ್ಲಿ ಮಂತ್ರಿ ಮಂಡಲ ರಚನೆಯಾಗದೆ ಇದ್ದಾಗ ಒಬ್ಬರೇ ಓಡಾಡಿ ನೊಂದ ಜನರಿಗೆ ನೆರವಾಗಿದ್ದಾರೆ. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡಲು 5 ಲಕ್ಷ ರೂಪಾಯಿ ನೀಡಿದ್ದರು. ಇನ್ನು ಕೊರೋನಾ ತಡೆಗಾಗಿ ಹೊರಗೆ ಬಂದು ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯದ ಸಿಎಂ ಗಳು ಹೊರಗೆ ಬರ್ತಿಲ್ಲ. ಅಂತದ್ದರಲ್ಲಿ ಬಿಎಸ್ ಯಡಿಯೂರಪ್ಪ ಈ ವಯಸ್ಸಲ್ಲೂ ಸಭೆಗಳನ್ನು ಮಾಡಿ ಕೊರೋನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಶಂಶಿಸಿದ್ದಾರೆ.
ಲಾಕ್ ಡೌನ್ ಸಡಿಲಿಕೆ ನಂತರ ಯಡಿಯೂರಪ್ಪ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ಕಾರ್ಮಿಕರು, ಬಡವರು, ಕೃಷಿಕರಿಗೆ ಪರಿಹಾರ ಕೊಟ್ಟಿದ್ದಾರೆ. ಕಷ್ಟದ ಸಂದರ್ಭದಲ್ಲಿ ನೇತೃತ್ವ ವಹಿಸುವವನೇ ನಿಜವಾದ ನಾಯಕ. ಸುಖದಲ್ಲಿ ನಾಯಕತ್ವ ಕೊಟ್ಟರೆ ಅದಕ್ಕೆ ಬೆಲೆ ಇಲ್ಲ. ಕಷ್ಟದಲ್ಲಿ ನಾಯಕತ್ವ ಕೊಡೋದೇ ಒಂದು ಸವಾಲು. ಈ ಸವಾಲನ್ನು ಯಡಿಯೂರಪ್ಪ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ