*ಕುರ್ಚಿ ಉಳಿಸಿಕೊಳ್ಳಲು ಬೇಕಾಬಿಟ್ಟಿ ಎಲ್ಲರಿಗೂ ಗೂಟದ ಕಾರು; ಕಾನೂನು ಗಾಳಿಗೆ ತೂರಿದ ಸಿಎಂ; ಆರ್.ಅಶೋಕ್ ಆಕ್ರೋಶ*
73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ; ಬಿಜೆಪಿ ಕಿಡಿ
ಪ್ರಗತಿವಾಹಿನಿ ಸುದ್ದಿ: “ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ” ಎಂಬಂತೆ ರೈತರ ಬರ ಪರಿಹಾರಕ್ಕೆ, ಅಭಿವೃದ್ಧಿಗೆ ಹಣವಿಲ್ಲದಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ 73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಜನರ ತೆರಿಗೆ ಹಣ ಪೋಲು ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
135 ಶಾಸಕರಲ್ಲಿ 34 ಸಚಿವರು, ನಿಗಮ ಮಂಡಳಿಗಳ ಅಧ್ಯಕ್ಷರು, ಸಲಹೆಗಾರರು, ದೆಹಲಿ ಪ್ರತಿನಿಧಿ ಸೇರಿದಂತೆ ಈಗ ಒಟ್ಟು 73 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಲಾಗಿದ್ದು, ಗ್ಯಾರೆಂಟಿ ಜಾರಿ ಸಮಿತಿಯ 10 ಮಂದಿಗೂ ಸಂಪುಟ ದರ್ಜೆ ಸ್ಥಾನ ನೀಡಿದರೆ 80ಕ್ಕೂ ಹೆಚ್ಚು ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಿದಂತಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಅತೃಪ್ತ ಶಾಸಕರ ಬಂಡಾಯ ಶಮನ ಮಾಡಲಾಗದ ದುರ್ಬಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಬೇಕಾಬಿಟ್ಟಿ ಎಲ್ಲರಿಗೂ ಗೂಟದ ಕಾರು ನೀಡಿ ಸಮಾಧಾನ ಮಾಡುವ ಕಸರತ್ತು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸನಸಭೆಯ ಒಟ್ಟು ಸದಸ್ಯ ಬಲದ 15%ರಷ್ಟು ಮಂದಿಗೆ ಮಾತ್ರ ಸಂಪುಟ ಸ್ಥಾನ ನೀಡಬಹುದು ಎಂಬ ಕಾನೂನನ್ನ ಗಾಳಿಗೆ ತೂರಿ ಮಾಡುತ್ತಿರುವ ಈ ನೇಮಕಗಳು ಅಸಂವಿಧಾನಿಕವಾಗಿದ್ದು ಇದನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ