Politics

*ಸಚಿವರಿಗೊಂದು ನ್ಯಾಯ; ತಮಗೊಂದು ನ್ಯಾಯ ಬೇಡ; ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಆರ್.ಅಶೋಕ್ ಒತ್ತಾಯ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಆದೇಶ ನೀಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದ ಹೈಕೋರ್ಟ್‌ನ ತೀರ್ಪು ಸ್ವಾಗತಾರ್ಹ. 40 ವರ್ಷದಿಂದ ಕಪ್ಪು ಚುಕ್ಕೆ ಇಲ್ಲವೆಂದು ಎದೆ ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಲಾದರೂ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಮುಡಾ ಹಗರಣ ಸಂಬಂಧ ತನಿಖೆಗೆ ಆದೇಶ ನೀಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದ ಹೈಕೋರ್ಟ್‌‌ ತೀರ್ಪಿನ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

ಇದು ಸತ್ಯಕ್ಕೆ ಹಾಗೂ ಬಿಜೆಪಿಯ ಹೋರಾಟಕ್ಕೆ ಸಿಕ್ಕಿರುವ ಜಯ. ಈಗಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ. ಸಿದ್ದರಾಮಯ್ಯನವರು ನನ್ನ ಬದುಕು ತೆರೆದ ಪುಸ್ತಕ, ಕಪ್ಪು ಚುಕ್ಕೆ ಇಲ್ಲ ಎಂದೆಲ್ಲ ಹೇಳಿಕೊಂಡಿದ್ದರು. ಇಷ್ಟೆಲ್ಲ ಆದ ನಂತರವೂ ಅವರು ರಾಜೀನಾಮೆ ನೀಡದೆ ಕುರ್ಚಿಗೆ ಅಂಟಿಕೊಂಡು ಕುಳಿತರೆ ಅದು ಅವರೇ ಹೇಳಿಕೊಳ್ಳುವ 40 ವರ್ಷಗಳ ರಾಜಕೀಯ ಬದುಕಿಗೆ ಹಾಗೂ ರಾಜ್ಯದ ಜನರಿಗೆ ಮಾಡುವ ಅಪಮಾನವಾಗುತ್ತದೆ. ಆದ್ದರಿಂದ ಕೂಡಲೇ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಹಿಂದಿನ ಅವಧಿಯಲ್ಲಿ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಸಂತೋಷ್‌ ಲಾಡ್‌ ವಿರುದ್ಧ ಆರೋಪ ಕೇಳಿಬಂದಾಗ ಕೂಡಲೇ ರಾಜೀನಾಮೆ ಪಡೆಯಲಾಗಿತ್ತು. ಈ ಅವಧಿಯಲ್ಲಿ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಅವರಿಗೆ ಒಂದು ಕಾನೂನು, ನನಗೆ ಒಂದು ಕಾನೂನು ಎಂಬ ಧೋರಣೆ ಸಿಎಂ ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿದೆ. ಕಾನೂನು ಹಾಗೂ ನೈತಿಕತೆ ಎಲ್ಲರಿಗೂ ಒಂದೇ ಆಗಿದ್ದು, ಆ ದೃಷ್ಟಿಯಿಂದಾದರೂ ರಾಜೀನಾಮೆ ನೀಡಲಿ ಎಂದರು.

ನಾನೊಬ್ಬ ಸಂವಿಧಾನ ತಜ್ಞ, ಕಾನೂನು ತಜ್ಞ ಎಂದು ಹೇಳಿಕೊಳ್ಳುವ ಲಾಯರ್ ಸಿದ್ದರಾಮಯ್ಯ ರವರಿಗೆ ಕಾನೂನಿನ ಮೇಲೆ, ಸಂವಿಧಾನದ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ, ಈ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು

ನಾನು ರಾಮಕೃಷ್ಣ ಹೆಗಡೆಯವರ ಶಿಷ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ರಾಮಕೃಷ್ಣ ಹೆಗಡೆ ಆರೋಪ ಬಂದಾಗಲೇ ರಾಜೀನಾಮೆ ನೀಡಿದ್ದರು. ಈಗ ಕೋರ್ಟ್‌ ಆದೇಶ ಬಂದಿರುವುದರಿಂದ ಇವರು ಕೂಡ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಸತ್ಯಮೇವ ಜಯತೇ

ಸತ್ಯಮೇವ ಜಯತೇ ಎಂಬ ಮಾತು ನಿಜ. ಮುಡಾ ಹಗರಣ ಸಂಬಂಧ ತನಿಖೆಗಾಗಿ ಆಗ್ರಹಿಸಿ ವಿಧಾನಸೌಧದಲ್ಲಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಮಾಡಲಾಗಿತ್ತು. ಈ ವಿಷಯವನ್ನು ಪ್ರಸ್ತಾಪ ಮಾಡಲು ಕೂಡ ಸರ್ಕಾರ ಅವಕಾಶ ಕೊಟ್ಟಿರಲಿಲ್ಲ. ಪ್ರಜಾಪ್ರಭುತ್ವದ ವೇದಿಕೆಯಲ್ಲಿ ಚರ್ಚೆ ಮಾಡದೆ ಸಿಎಂ ಸಿದ್ದರಾಮಯ್ಯ ಓಡಿ ಹೋದಾಗಲೇ ಏನೋ ತಪ್ಪಾಗಿದೆ ಎಂಬುದು ಸ್ಪಷ್ಟವಾಗಿತ್ತು. ನಂತರ ಬಿಜೆಪಿ ಪಾದಯಾತ್ರೆ ಹೋರಾಟ ಮಾಡಿದೆ. ಪ್ರತಿ ದಾಖಲೆಗಳನ್ನು ಬಿಡುಗಡೆ ಮಾಡಿ ಜನರಿಗೆ ಈ ಕುರಿತು ತಿಳಿಸಲಾಗಿದೆ. ಇದು ಬಿಜೆಪಿಯ ಹೋರಾಟಕ್ಕೆ ಸಿಕ್ಕ ಜಯ, ಕಾಂಗ್ರೆಸ್‌ ಸರ್ಕಾರಕ್ಕೆ ಹಿನ್ನಡೆ ಎಂದರು.

ಬಿಜೆಪಿ ಸರ್ಕಾರವಿದ್ದಾಗ 40% ಭ್ರಷ್ಟಾಚಾರದ ಆರೋಪ ಮಾಡಿದ್ದರೂ, ಕಳೆದ 16 ತಿಂಗಳಲ್ಲಿ ಒಂದೇ ಒಂದು ದಾಖಲೆ ಬಿಡುಗಡೆ ಮಾಡಲಿಲ್ಲ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಈಗ ಏನು ಹೇಳುತ್ತಾರೆಂದು ಜನರು ನಿರೀಕ್ಷೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ. ರಾಜ್ಯದ ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿ ಆರೋಪ ಬಂದಾಗ ರಾಜೀನಾಮೆ ನೀಡಿದ್ದರು. ಆ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಲಾಬಿ ಶುರು

ಮುಡಾ ಹಗರಣದ ಬಗ್ಗೆ ಮಾತನಾಡಲು ಸದನದಲ್ಲಿ ಅವಕಾಶ ಕೊಟ್ಟಿದ್ದರೆ ಅಂದೇ ಎಲ್ಲವೂ ಬಯಲಾಗುತ್ತಿತ್ತು. ವಾಲ್ಮೀಕಿ ನಿಗಮದ ಹಗರಣದ ಸಚಿವರ ರಾಜೀನಾಮೆ ಆಗಿ ಒಂದು ವಿಕೆಟ್‌ ಬಿದ್ದಿದೆ. ಈಗ ಮತ್ತೊಂದು ವಿಕೆಟ್‌ ಬೀಳಬೇಕಿದೆ. ಈ ಕ್ಷಣದಿಂದ ಐದಾರು ಜನರು ಎಚ್ಚರಗೊಂಡು ದೆಹಲಿಗೆ ಹೋಗುತ್ತಾರೆ. ಸಿಎಂ ಆಗಲು ಲಾಬಿ ಶುರುವಾಗಲಿದೆ ಎಂದರು.

ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್‌ ಕಚೇರಿಯಲ್ಲಿ ದಾಖಲೆಗಳನ್ನು ಹೊರತೆಗೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ದಾಖಲೆ ತೆಗೆದಿದ್ದು ಯಾರು ಎಂಬುದು ಅರ್ಥವೇ ಆಗಲಿಲ್ಲ. ಸರ್ಕಾರ ಇದ್ದಾಗ, ಆ ಸರ್ಕಾರದಲ್ಲಿರುವವರಿಗೆ ಮಾತ್ರ ಬೇಗ ದಾಖಲೆಗಳು ದೊರೆಯುತ್ತದೆ. ಲಿಂಗಾಯತರು, ಒಕ್ಕಲಿಗರು ಎಂದು ಹೇಳಿಕೊಂಡು ಸಿಎಂ ಆಗಲು ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ. ಹೊಸ ಮುಖ್ಯಮಂತ್ರಿ ಕಾಂಗ್ರೆಸ್‌ನಲ್ಲೇ ತಯಾರಾಗುತ್ತಿದ್ದಾರೆ. ನಾವು ಈ ಸರ್ಕಾರವನ್ನು ಬೀಳಿಸಲ್ಲ, ದುರಾಡಳಿತದಿಂದ ಸರ್ಕಾರವೇ ಬೀಳಲಿದೆ ಎಂದು ನಾನು ಹೇಳಿದ್ದೆ. ಅದು ಈಗ ನಿಜವಾಗುತ್ತಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button