Karnataka NewsLatestPolitics

*ಸಿಎಂ ವಿರುದ್ಧದ ತನಿಖೆಗೆ ರಾಜ್ಯಪಾಲರ ಅನುಮತಿ, ಬಿಜೆಪಿ ಪಾದಯಾತ್ರೆಗೆ ಸಿಕ್ಕ ಯಶಸ್ಸು: ಪ್ರತಿಪಕ್ಷ ನಾಯಕ ಆರ್‌.ಅಶೋಕ*

ಪ್ರಗತಿವಾಹಿನಿ ಸುದ್ದಿ: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ಬಿಜೆಪಿ ಪಾದಯಾತ್ರೆಗೆ ಸಿಕ್ಕಿರುವ ಯಶಸ್ಸು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿಲ್ಲ. ಅಕ್ರಮ ಬಯಲಿಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬುದು ನಮ್ಮ ಉದ್ದೇಶ. ಇದರ ಸತ್ಯ ಏನೆಂದು ಗೊತ್ತಾಗಲಿ. 86 ಸಾವಿರ ಜನರು ನಿವೇಶನಕ್ಕೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಅವರಿಗೆ ಈ ತನಿಖೆಯಿಂದ ನ್ಯಾಯ ದೊರೆಯಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದ ಬಗ್ಗೆ ಸ್ಪಷ್ಟನೆ ನೀಡಲು ಸಾಧ್ಯವಾಗಿಲ್ಲ. ಸದನದಲ್ಲಿ ನಿಲುವಳಿ ಸೂಚನೆಗೆ ಅವಕಾಶ ಕೊಟ್ಟು ಜನರಲ್ಲಿರುವ ಗೊಂದಲ ನಿವಾರಣೆ ಮಾಡಬೇಕಿತ್ತು. ಅದನ್ನು ಬಿಟ್ಟು ಪಲಾಯನ ಮಾಡಿದ್ದರಿಂದ ಇದರಲ್ಲಿ ಏನೋ ಇದೆ ಎಂಬ ಅನುಮಾನ ಎಲ್ಲರಿಗೂ ಸ್ಪಷ್ಟವಾಯಿತು. ಪ್ರತಿ ಹಂತದಲ್ಲೂ ಸಿದ್ದರಾಮಯ್ಯನವರ ಹಸ್ತಕ್ಷೇಪ ಕಂಡುಬಂದಿದೆ. ಡಿ ನೋಟಿಫಿಕೇಶನ್‌, ಭೂ ಪರಿವರ್ತನೆ ಈ ಎಲ್ಲ ಹಂತದಲ್ಲೂ ಅವರ ಹುದ್ದೆಯ ಪ್ರಭಾವ ಬಳಕೆಯಾಗಿದೆ. ಇಷ್ಟೆಲ್ಲ ಆಗಿರುವಾಗ ಇದು ದೊಡ್ಡ ಹಗರಣ ಎಂಬುದು ಸಾಬೀತಾಗಿದೆ ಎಂದರು.

ಕಾಂಗ್ರೆಸ್‌ ಈಗ ದ್ವೇಷದ ರಾಜಕಾರಣ ಮಾಡಿದರೆ ಅರ್ಥವಿಲ್ಲ. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು, ಸಿಬಿಐ ತನಿಖೆಯಾಗಬೇಕು ಹಾಗೂ ಎಲ್ಲ ನಿವೇಶನಗಳನ್ನು ವಾಪಸ್‌ ಪಡೆಯಬೇಕೆಂಬುದು ನಮ್ಮ ಬೇಡಿಕೆ. ನಿವೇಶನ ವಂಚಿತರಾದ ಜನರಿಗೆ ನ್ಯಾಯ ಸಿಗಬೇಕೆಂದು ನಮ್ಮ ಆಗ್ರಹ ಎಂದು ತಿಳಿಸಿದರು.

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಗಿನ ರಾಜ್ಯಪಾಲರು ಖಾಸಗಿ ದೂರಿಗಾಗಿ ತನಿಖೆಗೆ ಅನುಮತಿ ನೀಡಿದ್ದರು. ಆಗ ಕಾಂಗ್ರೆಸ್‌ ಕೈವಾಡವಿತ್ತು ಎಂದರೆ ಅದನ್ನು ಒಪ್ಪುತ್ತಾರಾ? ಈಗ ನೈತಿಕತೆಯ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು. ಆಗ ಯಡಿಯೂರಪ್ಪ ತೋರಿದ ನಡೆಯನ್ನು ಸಿದ್ದರಾಮಯ್ಯ ಈಗ ತೋರಲಿ. ರಾಜ್ಯಪಾಲರು ಸರ್ಕಾರದ ಭಾಗ. ಅವರ ವಿರುದ್ಧ ಕಾಂಗ್ರೆಸ್‌ ಪ್ರತಿಭಟಿಸಿದರೆ ಅವರು ಸಂವಿಧಾನಕ್ಕೆ ತೋರುವ ಅಗೌರವ ಎಂದರು.

ಕಾಂಗ್ರೆಸ್‌ ಅಭಿವೃದ್ಧಿ ಮಾಡದೆ ಹೈಕಮಾಂಡ್‌ಗೆ ಎಟಿಎಂ ಆಗಿ ಕೆಲಸ ಮಾಡುತ್ತಿದೆ. ತುಂಗಭದ್ರಾ ಜಲಾಶಯದ ಗೇಟ್‌ ದುರಸ್ತಿ ಮಾಡಲು ಕೂಡ ಸರ್ಕಾರದ ಬಳಿ ಹಣವಿಲ್ಲ ಎಂದು ದೂರಿದರು.

ಸರ್ಕಾರ ಅಸ್ಥಿರಗೊಳಿಸುತ್ತಿಲ್ಲ

ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಶಾಸಕರೇ ತಿರುಗಿಬಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button