Karnataka NewsLatestPolitics

*ಬಾಂಗ್ಲಾ ನಿವಾಸಿಗಳಿಗೆ ಮನೆ ನೀಡಲು ಏಕೆ ಆತುರ? ವೋಟ್‌ ಪಾಲಿಟಿಕ್ಸ್‌ ಬೇಡ: ಆರ್.ಅಶೋಕ್ ಕಿಡಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯಪಾಲರ ಭಾಷಣದ ಮೂಲಕ ಕಾಂಗ್ರೆಸ್‌ ಸರ್ಕಾರ ಕೇವಲ ಸುಳ್ಳುಗಳನ್ನೇ ಹೇಳಿಸಿದೆ. ಸಿಎಂ ಸಿದ್ದರಾಮಯ್ಯನವರು ಹುಲಿಯಾ ಬದಲು ಇಲಿಯಾ ಆಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಅವರು, ವಿಬಿ ಜಿ ರಾಮ್‌ ಜಿ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ ಜಾರಿಯಾಗಿದೆ. ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿದ್ದೇಕೆ ಎಂದು ಕಾಂಗ್ರೆಸ್‌ ನಾಯಕರು ಪ್ರಶ್ನಿಸುತ್ತಿದ್ದಾರೆ. ರಾಮನ ಹೆಸರನ್ನು ಕಂಡರೆ ಕಾಂಗ್ರೆಸ್‌ಗೆ ಆಗಲ್ಲ. ಇದೇ ಕಾರಣಕ್ಕೆ ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಲಾಗಿದೆ. ರಾಮಲಿಂಗಾರೆಡ್ಡಿ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಈಗ ಅಲ್ಲಿ ಜಿಲ್ಲೆಯೇ ಇಲ್ಲ. ಮಹಾತ್ಮ ಗಾಂಧೀಜಿಯವರು ರಘುಪತಿ ರಾಘವ ರಾಜಾರಾಮ್‌ ಎಂದು ಹೇಳಿದ್ದರು. ಕಾಂಗ್ರೆಸ್‌ ಸರ್ಕಾರ ಕೇಂದ್ರದ ವಿರುದ್ಧ 18 ನಿರ್ಣಯಗಳನ್ನು ತೆಗೆದುಕೊಂಡಿದೆ. ಹೀಗೆ ಎಲ್ಲಕ್ಕೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದಾರೆ ಎಂದರು.

ಮಾಜಿ ಪ್ರಧಾನಿಗಳಾದ ಜವಹರಲಾಲ್‌ ನೆಹರು 17 ಬಾರಿ, ಇಂದಿರಾಗಾಂಧಿ 29 ಬಾರಿ, ರಾಜೀವ್‌ಗಾಂಧಿ 10 ಬಾರಿ ಸೇರಿದಂತೆ ಕಾಂಗ್ರೆಸ್‌ ಪಕ್ಷ 72 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. ಮಾಜಿ ಅಟಲ್‌ ಬಿಹಾರಿ ವಾಜಪೇಯಿ 14 ಬಾರಿ ಹಾಗೂ ಪ್ರಧಾನಿ ನರೇಂದ್ರ ಮೋದಿ 8 ಬಾರಿ ತಿದ್ದುಪಡಿ ಮಾಡಿದ್ದಾರೆ. ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದ ಕಾಂಗ್ರೆಸ್‌ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. “ಸಂವಿಧಾನವು ನಿರಂತರವಾಗಿರಬೇಕೆಂದರೆ ನಾವು ಅದನ್ನು ಬದಲಾಯಿಸುತ್ತಿರಬೇಕೆಂದು” ಜವಹರಲಾಲ್‌ ನೆಹರು ಹೇಳಿದ್ದರು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದ ಬಗ್ಗೆ ಬೇಜಾರಾಗಿ ಅದನ್ನು ಸುಟ್ಟುಹಾಕುತ್ತೇನೆಂದು ಹೇಳಿದ್ದರು ಎಂದರು.

ಎಷ್ಟು ಯೋಜನೆಗಳಿಗೆ ಹೆಸರಿದೆ?

Home add -Advt

ಕಾಂಗ್ರೆಸ್‌ ಎಷ್ಟು ಯೋಜನೆಗಳಿಗೆ ಮಹಾತ್ಮ ಗಾಂಧೀಜಿಯ ಹೆಸರಿಟ್ಟಿದೆ? ಆದರೆ ಇಂದಿರಾಗಾಂಧಿ ಕುಟುಂಬದವರ ಹೆಸರುಗಳನ್ನು ಹೆಚ್ಚಾಗಿ ಇರಿಸಲಾಗಿದೆ. ರಾಜೀವ್‌ ಗಾಂಧಿ ಗ್ರಾಮೀಣ ವಿದ್ಯುತ್‌ ಯೋಜನೆ, ರಾಜೀವ್‌ ಗಾಂಧಿ ಕುಡಿಯುವ ನೀರಿನ ಮಿಷನ್‌, ರಾಜೀವ್‌ ಗಾಂಧಿ ರಾಷ್ಟ್ರೀಯ ಶಿಶು ವಿಹಾರ, ಇಂದಿರಾ ಆವಾಸ್‌, ಜವಹರಲಾಲ್‌ ನೆಹರು ನಗರ ನವೀಕರಣ, ನೆಹರು ರೋಜ್‌ಗಾರ್‌, ಇಂದಿರಾಗಾಂಧಿ ಕಾಲುವೆ ಯೋಜನೆ, ರಾಜೀವ್‌ ಗಾಂಧಿ ಸಾಮಾಜಿಕ ಭದ್ರತೆ, ಇಂದಿರಾಗಾಂಧಿ ಪಥ ಯೋಜನೆ, ರಾಜೀವ್‌ ಗಾಂಧಿ ನಾಗರಹೊಳೆ ಅಭಯಾರಣ್ಯ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಜವಹರಲಾಲ್‌ ನೆಹರು ಆಸ್ಪತ್ರೆ, ಹೀಗೆ 454 ಯೋಜನೆ, ಸಂಸ್ಥೆಗಳಿಗೆ ಇವರ ಕುಟುಂಬದವರ ಹೆಸರನ್ನೇ ಇಡಲಾಗಿದೆ ಎಂದರು.

80 ಪರ್ಸೆಂಟ್‌ ಸರ್ಕಾರ

ಗುತ್ತಿಗೆದಾರರು ಮೂರು ಬಾರಿ ಸುದ್ದಿಗೋಷ್ಠಿ ನಡೆಸಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿಜೆಪಿ ಸರ್ಕಾರವಿದ್ದರೂ 40 ಪರ್ಸೆಂಟ್‌ ಎಂದು ಆರೋಪ ಮಾಡಲಾಗಿತ್ತು. ಮಧ್ಯವರ್ತಿಗಳ ಹಾವಳಿ, ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟು ಕಮಿಶನ್‌, 80 ಪರ್ಸೆಂಟ್‌ ಕಮಿಶನ್ ಹೀಗೆ ಮೊದಲಾದ ಆರೋಪಗಳನ್ನು ಮಾಡಿದ್ದಾರೆ. ಅವರು ಮಾಡಿರುವ ಆರೋಪ ರಾಹುಲ್‌ ಗಾಂಧಿಯ ತನಕ ಹೋಗಿದೆ. ಆಂಧ್ರದವರಿಗೆ ಟೆಂಡರ್‌ ನೀಡಲಾಗಿದೆ, ಹಳೆ ಬಿಲ್‌ಗಳಿಗೆ ಹೆಚ್ಚಿನ ಕಮಿಶನ್‌ ಪಡೆಯಲಾಗುತ್ತಿದೆ, 37,370 ಕೋಟಿ ರೂ. ಬಾಕಿ ಇದೆ ಎಂದಿದ್ದರೂ ಸರ್ಕಾರ ಕ್ರಮ ವಹಿಸಿಲ್ಲ, ಮುಷ್ಕರ ಮಾಡದೇ ಬೇರೆ ದಾರಿಯಿಲ್ಲ ಎಂದು ಗುತ್ತಿಗೆದಾರರ ಸಂಘ ತಿಳಿಸಿದೆ. ನಗರಾಭಿವೃದ್ಧಿ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಘ ಪತ್ರ ಬರೆದಿದೆ. ಇಷ್ಟೆಲ್ಲ ಆಪಾದನೆಗಳು ಬಂದರೂ ಗುತ್ತಿಗೆದಾರರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದರೆ, ಸರ್ಕಾರ ತಪ್ಪು ಮಾಡಿದೆ ಎಂದೇ ಅರ್ಥ ಎಂದರು.

ಕಲ್ಯಾಣ ಕರ್ನಾಟಕ ಮಂಡಳಿಯ ವತಿಯಿಂದ ಮಾಡಬೇಕಿರುವ ಕಾಮಗಾರಿಗಳನ್ನು ಇನ್ನೂ ನಡೆಸಿಲ್ಲ. ಸರ್ಕಾರದಿಂದ 5,000 ಕೋಟಿ ರೂ. ನೀಡಿದ್ದರೂ ಕಾಮಗಾರಿ ಮಾಡಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಈ ಎಲ್ಲ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಹಿಂದಿನ ಬಿಜೆಪಿ ಬಾಕಿ ಇಟ್ಟುಕೊಂಡಿದೆ ಎಂದು ಹೇಳಿದ್ದಾರೆ. ಹಿಂದೆ 14,000 ಕೋಟಿ ರೂ. ಬಾಕಿ ಬಿಲ್‌ ಇರಿಸಿದ್ದಾಗ ಬಿಜೆಪಿ ಅದನ್ನು ಪಾವತಿಸಿತ್ತು. ಬಿಲ್‌ ಪಾವತಿಸುವುದು ನಿರಂತರ ಪ್ರಕ್ರಿಯೆ. 40 ಪರ್ಸೆಂಟ್‌ ಎಂಬ ಭಿತ್ತಿಪತ್ರಗಳನ್ನು ಕಾಂಗ್ರೆಸ್‌ ನಾಯಕರು ಎಲ್ಲ ಕಡೆ ಅಂಟಿಸಿದ್ದರು. ಈಗ ಈ ಆರೋಪದ ಪತ್ರಗಳನ್ನು ಜನರು ಕಾಂಗ್ರೆಸ್‌ ನಾಯಕರ ಮುಖದ ಮೇಲೆ ಅಂಟಿಸುತ್ತಾರೆ ಎಂದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿರುವಂತೆ, ಅವರು ನಿರ್ಗಮಿಸುವಾಗ 24,000 ಕೋಟಿ ರೂ. ಖಜಾನೆಯಲ್ಲಿ ಬಿಟ್ಟಿದ್ದಾರೆ. ಮೆಟ್ರೊದಲ್ಲಿ 2,000 ಕೋಟಿ ರೂ. ಹಣ ಇತ್ತು. ಆದರೆ ಕಾಂಗ್ರೆಸ್‌ ಬಂದ ನಂತರ ನಿರಂತರ ಭ್ರಷ್ಟಾಚಾರ ನಡೆದಿದೆ. ಮುಡಾದಲ್ಲಿ 3,000 ಕೋಟಿ ರೂ ಅಕ್ರಮ, ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಅಕ್ರಮ, ದಲಿತರ 43,000 ಕೋಟಿ ರೂ. ಅಕ್ರಮ ಬಳಕೆ, ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. 30 ವರ್ಷಕ್ಕಾಗಿ ಮಾಡುವ ಕಾಂಕ್ರೀಟ್‌ ರಸ್ತೆ ಉದ್ಘಾಟನೆಗೆ ಮುನ್ನವೇ ಕಿತ್ತುಹೋಗಿದೆ ಎಂದರು.

ಮಹಾತ್ಮ ಗಾಂಧೀಜಿಯವರನ್ನು ಬಳಸಿಕೊಂಡು ಕಾಂಗ್ರೆಸ್‌, ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಭ್ರಷ್ಟಾಚಾರದ ಜಾಹೀರಾತು ಓಡಾಡುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಗುತ್ತಿಗೆದಾರ ಮುನೇಗೌಡ ಎಂಬುವರು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ಮುನ್ನ ತೆರಿಗೆ ಹಾಕಲ್ಲ ಎಂದು ಹೇಳಿ, ನಂತರ 56,000 ಕೋಟಿ ರೂ. ತೆರಿಗೆ ಹಾಕಿದ್ದಾರೆ. 40 ಪರ್ಸೆಂಟ್‌ ಕಮಿಶನ್‌ನಲ್ಲಿ ಉಳಿಸಿದ ಹಣದಿಂದ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ. ಬಜೆಟ್‌ನಲ್ಲಿ 40% ಎಂದರೆ 1.60 ಲಕ್ಷ ಕೋಟಿ ರೂ. ಆಗುತ್ತದೆ. ಎರಡೂ ಸೇರಿದರೆ 2 ಲಕ್ಷ ಕೋಟಿ ರೂ.ಗೂ ಹೆಚ್ಚಾಗುತ್ತದೆ. ಈ ಹಣ ಎಲ್ಲಿದೆ? ಗುತ್ತಿಗೆದಾರರು 80 ಪರ್ಸೆಂಟ್‌ ಕಮಿಶನ್‌ ಬಗ್ಗೆ ಹೇಳಿರುವಾಗ, ಅದು ಸುಳ್ಳಾಗಿದ್ದರೆ ಕ್ರಮ ಕೈಗೊಳ್ಳಬೇಕಿತ್ತು. ಗುತ್ತಿಗೆದಾರರು ಗುತ್ತಿಗೆ ಪಡೆಯುವಾಗಲೇ 12% ಕಮಿಶನ್‌ ಹಾಗೂ ಬಿಲ್‌ ಮಂಜೂರಾತಿಗೆ 7% ನೀಡಬೇಕಾಗುತ್ತದೆ ಎಂದರು.

ಅತಿ ಹೆಚ್ಚು ಸಾಲ

ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಅಂದರೆ 7.64 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಕೆಂಗಲ್‌ ಹನುಮಂತಯ್ಯನವರಿಂದ ಆರಂಭವಾಗಿ ಈವರೆಗಿನ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ. ಹಣ ನೀಡುತ್ತೇವೆಂದು ಹೇಳಿ ಇನ್ನೂ ನೀಡಿಲ್ಲ. ಆರ್ಥಿಕ ಇಲಾಖೆ ಇನ್ನೂ ಹಣ ನೀಡಿಲ್ಲವೆಂದರೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಏನು ಮಾಡುತ್ತಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಅನ್ನಭಾಗ್ಯದ 657 ಕೋಟಿ ರೂ. ಮೊತ್ತ ಜನರಿಗೆ ಸಿಕ್ಕಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ನೀಡದೆ ಶಾಸಕರು ಪರದಾಡುತ್ತಿದ್ದಾರೆ, ಅಂಗನವಾಡಿ ಸಹಾಯಕರ ಗೌರವಧನ ನೀಡದೆ ಅವರು ಪರದಾಡುತ್ತಿದ್ದಾರೆ, ನೆರೆ ಪರಿಹಾರ ನೀಡದೆ ರೈತರು ಪರದಾಡುತ್ತಿದ್ದಾರೆ. ಆದರೆ ಸಚಿವರು ಹಣ ಮಾಡುವುದರಲ್ಲಿ ಕಿತ್ತಾಟ ಮಾಡುತ್ತಿದ್ದಾರೆ. ಇದು ಇಲ್ಲಗಳ ಸರ್ಕಾರ. ಸರ್ಕಾರದ ಖಜಾನೆಯಲ್ಲಿ ಹೆಗ್ಗಣಗಳ ಕಾಟದಿಂದ ಯಾವ ಹಣವನ್ನೂ ನೀಡಲು ಆಗುತ್ತಿಲ್ಲ. ಸರ್ಕಾರದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಧಾರವಾಡದಲ್ಲಿ 10 ಸಾವಿರ ಅಭ್ಯರ್ಥಿಗಳು ಹೋರಾಟ ಮಾಡುತ್ತಿದ್ದಾರೆ ಎಂದರು.

ಕಲಾವಿದೆಗೆ ಅಪಮಾನ

ಕಲಾವಿದೆ ಬಿ.ಜಯಶ್ರೀ 5 ಗುಂಟೆ ಭೂಮಿ ದಾನ ಮಾಡಲು ಮೂರು ಬಾರಿ ಅರ್ಜಿ ನೀಡಿದ್ದರೂ, ಕಂದಾಯ ಇಲಾಖೆ ಸ್ಪಂದಿಸಿಲ್ಲ. ಕೊನೆಗೆ ಅವರು ಸರ್ವೆ ಕಚೇರಿಗೆ ಹೋಗಿ ಕೇಳಿದಾಗ, ನಿಮ್ಮ ಕೆಲಸಕ್ಕಿಂತ ನಮ್ಮ ಮೇಲಧಿಕಾರಿಯ ಕೆಲಸ ಮುಖ್ಯ ಎನ್ನುತ್ತಾರೆ. ಅಧಿಕಾರಿ ಉಡಾಫೆಯಿಂದ ಮಾತಾಡುತ್ತಾರೆ ಎಂದು ಜಯಶ್ರೀ ಬೇಸರದಿಂದ ಹೇಳಿದ್ದಾರೆ. ದಾನ ಮಾಡುವ ಭೂಮಿಗೆ ಲಂಚ ಪಡೆಯಲು ಅವರನ್ನು ಅಲೆಸುತ್ತಿದ್ದಾರೆ. ಸರ್ಕಾರಕ್ಕೆ ಮರ್ಯಾದೆ ಇದ್ದರೆ ಆ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕಿತ್ತು. ಮನೆ ಬಾಗಿಲಿಗೆ ಸರ್ಕಾರ ಎಂದು ಪ್ರಚಾರ ಮಾಡಿದರೂ ಕಲಾವಿದೆಯನ್ನು ಕಚೇರಿಗೆ ಕರೆಸಿದ್ದಾರೆ. ಇಂತಹ ಕಳ್ಳ ಅಧಿಕಾರಿಯ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬೆಂಗಳೂರಲ್ಲಿ ಕಸ

ಬೆಂಗಳೂರನ್ನು 5 ಭಾಗ ಮಾಡಿದ ಬಳಿಕ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ಅಧಿಕಾರಿಗಳಿಗೆ ಆಗುತ್ತಿಲ್ಲ. ಇದರಿಂದಾಗಿ ಕಸ ಹಾಗೂ ರಸ್ತೆ ಗುಂಡಿ ಹೆಚ್ಚಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ 15 ದಿನಗಳಲ್ಲಿ ಗುಂಡಿ ಮುಚ್ಚುತ್ತೇವೆ, ಬ್ರ್ಯಾಂಡ್‌ ಬೆಂಗಳೂರು ಮಾಡುತ್ತೇವೆ ಎಂದರು. ನಮಗೆ ಕೆಂಪೇಗೌಡರ ಅಥವಾ ಎಸ್‌.ಎಂ.ಕೃಷ್ಣ ಅವರ ಬೆಂಗಳೂರನ್ನು ನೀಡಿದರೆ ಸಾಕಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಕಾಣೆಯಾಗಿದ್ದಾರೆ. ʼಕಾಣದಂತೆ ಮಾಯವಾದನು ನಮ್ಮ ಶಿವʼ ಎಂಬ ಹಾಡಿನಂತೆ ಅವರು ನಾಪತ್ತೆಯಾಗಿದ್ದಾರೆ. ಅಧಿಕಾರಕ್ಕಾಗಿ ಕಿತ್ತಾಟ ನಿಲ್ಲದೇ ಇದ್ದರೆ ಅಧಿಕಾರಿಗಳು ಕೆಲಸ ಮಾಡಲ್ಲ. ನಾವು ಹಾಲು ಸಕ್ಕರೆಯಂತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಇದು ಹಾಲಾಹಲವಾಗಿದೆ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಲು ಪದೇ ಪದೆ ದೆಹಲಿಗೆ ಹೋಗುತ್ತಿದ್ದಾರೆ. ಪವರ್‌ ಪಾಲಿಟಿಕ್ಸ್‌ನಿಂದಾಗಿ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಎಂದರು.

ಕಾನೂನು ಸುವ್ಯವಸ್ಥೆ

ನಮ್ಮ ಪೊಲೀಸ್‌ ವ್ಯವಸ್ಥೆ ಮಾದರಿ ಎಂದು ಗೃಹ ಇಲಾಖೆಯಿಂದ ರಾಜ್ಯಪಾಲರ ಭಾಷಣದಲ್ಲಿ ಬರೆಸಲಾಗಿದೆ. ಇತ್ತೀಚೆಗೆ ಒಬ್ಬ ತ್ರಿಬಲ್‌ ಸ್ಟಾರ್‌ ಎಸ್‌ಪಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತದಿಂದ ಬಂಧಿಸಿದ್ದು, ಆತ ಕಿರುಚುತ್ತಿರುವ ವೀಡಿಯೋ ವೈರಲ್‌ ಆಗಿದೆ. ಇವರ ಮೂಲಕ ಪೊಲೀಸ್‌ ಪೆರೇಡ್‌ ಮೈದಾನ ಲಂಚದ ಕೇಂದ್ರವಾಗಿದೆ. ಜಯನಗರದಲ್ಲಿ ಬ್ಯಾಂಕ್‌ ಹಣ ಲೂಟಿಯಾದಾಗ ಅದರಲ್ಲಿ ಒಬ್ಬ ಪೊಲೀಸ್‌ ಭಾಗಿಯಾಗಿದ್ದ. ಡ್ರಗ್ಸ್‌ ಮಾಫಿಯಾ ಪತ್ತೆ ಮಾಡುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ ಎಂದರು.

2023ಕ್ಕೆ ಹೋಲಿಸಿದರೆ 2024 ರಲ್ಲಿ, 739 ಅತ್ಯಾಚಾರ ಪ್ರಕರಣ ಕಂಡುಬಂದಿದ್ದು, ಶೇ.23% ಏರಿಕೆಯಾಗಿದೆ. ಫೋಕ್ಸೋ ಕೇಸ್‌ಗಳು 5% ರಷ್ಟು ಹೆಚ್ಚಿದೆ. 100 ರಷ್ಟು ವರದಕ್ಷಿಣೆ ಸಾವಾಗಿದೆ. ಸೈಬರ್‌ ಅಪರಾಧಗಳಲ್ಲಿ ಕರ್ನಾಟಕ ನಂ.1 ಆಗಿದ್ದು, 5,473 ಕೋಟಿ ರೂ. ವಂಚನೆಯಾಗಿದೆ. 1,131 ಕೊಲೆ ಪ್ರಕರಣ ನಡೆದಿದೆ. ಡ್ರಗ್‌ ಫ್ಯಾಕ್ಟರಿಗಳು ಪತ್ತೆಯಾಗುತ್ತಿದೆ. 2024 ರಲ್ಲಿ 5,200 ಡ್ರಗ್ಸ್‌ ಪ್ರಕರಣ ನಡೆದಿದ್ದು, 31.87 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. 2024 ರಲ್ಲಿ 3,961, 2025 ರಲ್ಲಿ 4,177 ಮಂದಿಯನ್ನು ಮಾದಕ ವಸ್ತುಗಳ ಕಳ್ಳಸಾಗಣೆಯಡಿ ಬಂಧಿಸಲಾಗಿದೆ. ಇದರಲ್ಲಿ 300-400 ಪೊಲೀಸರು ಕೂಡ ಇದ್ದಾರೆ. ಇಷ್ಟಾದರೂ ಶಾಂತಿಯ ತೋಟ ಎನ್ನುತ್ತಾರೆ ಎಂದರು.

33 ತಿಂಗಳಲ್ಲಿ 9 ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 15 ಕ್ಕೂ ಅಧಿಕ ಅಧಿಕಾರಿಗಳ ಅಸಹಜ ಸಾವಾಗಿದೆ. ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್‌, ಪಿಎಸ್‌ಐ ಪರಶುರಾಮ್‌ ಮೊದಲಾದವರಿಗೆ ನ್ಯಾಯ ಸಿಕ್ಕಿಲ್ಲ. ಒಬ್ಬ ಗ್ರಂಥಪಾಲಕಿ ವೇತನ ಇಲ್ಲದೆ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ಮಹಿಳಾ ಪೌರಾಯುಕ್ತೆಗೆ ಕೆಟ್ಟ ಮಾತುಗಳಲ್ಲಿ ನಿಂದಿಸಿ ಬೆಂಕಿ ಹಾಕುತ್ತೇನೆಂದು ಬೆದರಿಕೆ ಹಾಕಿದ್ದೇನೆ. ಕೇವಲ ಸಿಗರೇಟ್‌ ಸೇದುವ ಚಿತ್ರದ ಬ್ಯಾನರ್‌ ವಿಚಾರಕ್ಕೆ ನಿಂದಿಸಲಾಗಿದೆ. ಜೆಡಿಎಸ್‌ ಶಾಸಕಿ ಕರೆಮ್ಮ ನಾಯಕ್‌ಗೆ ಬೆದರಿಕೆ ಹಾಕಲಾಗಿದೆ ಎಂದರು.

ಕೋಗಿಲು ಕ್ರಾಸ್‌ ಒತ್ತುವರಿ

ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ಮಾಡಿದ್ದಕ್ಕೆ ಕೇರಳ ಸಿಎಂ ಬುಲ್ಡೋಜರ್‌ ಸರ್ಕಾರವೆಂದು ಟೀಕೆ ಮಾಡಿದಾಗ, ಸಿಎಂ ಸಿದ್ದರಾಮಯ್ಯ ಉಲ್ಟಾ ಹೊಡೆದು ನಾಳೆಯೇ ಮನೆ ನೀಡುತ್ತೇನೆ ಎಂದು ಘೋಷಿಸಿದರು. ಪಾಕಿಸ್ತಾನದ ವಕ್ತಾರ ಕರ್ನಾಟಕದಲ್ಲಿ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಇಲ್ಲಿಂದಲೇ ಯಾರೋ ಸಂದೇಶ ನೀಡಿದ್ದಾರೆ. ಕಂಟೋನ್‌ಮೆಂಟ್‌ ಬಳಿ ಇದ್ದ ಹುಡುಗಿ ಪರೀಕ್ಷೆ ಬರೆದು ವಾಪಸ್‌ ಬರುವಾಗ ಆಕೆಯ ಮನೆ ತೆರವು ಮಾಡಲಾಗಿತ್ತು. ಈ ಕನ್ನಡಿಗರಿಗೆ ಸರ್ಕಾರ ಸಹಾಯ ಮಾಡಿಲ್ಲ. ಕೇರಳದ ಒಬ್ಬ ಶಾಸಕರು ಇಲ್ಲಿಗೆ ಬಂದು ಸರ್ಕಾರವನ್ನು ಹಿಗ್ಗಾಮುಗ್ಗ ಬೈದು ಹೋಗಿದ್ದಾರೆ. ಬಾಂಗ್ಲಾ ನಿವಾಸಿಗಳ ವಿರುದ್ಧ ಪ್ರಶ್ನೆ ಮಾಡಿದ್ದಕ್ಕೆ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ. ಆದರೆ ಆ ಶಾಸಕರ ವಿರುದ್ಧ ಕೇಸ್‌ ದಾಖಲಿಸಿಲ್ಲ. ರಾಜ್ಯದಲ್ಲಿ ಎಲ್ಲ ಕಡೆ ಬಾಂಗ್ಲಾ ವಲಸಿಗರಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿ ಬಂದಿದೆ. 3 ಸಾವಿರ ರೂ. ಕೊಟ್ಟರೆ ಅವರಿಗೆ ಗುರುತಿನ ಚೀಟಿ ದೊರೆಯುತ್ತದೆ. ಚಿಕ್ಕಮಗಳೂರು, ಕೊಡಗು ಮೊದಲಾದ ಭಾಗಗಳಲ್ಲಿ ಇವರೇ ಇದ್ದಾರೆ. ಕೋಗಿಲು ಕ್ರಾಸ್‌ನಲ್ಲಿ ಕೂಡ ಇವರೇ ಇದ್ದಾರೆ. 34 ಜನರು ಇಲ್ಲಿಯವರೇ ಎಂದು ಮೊದಲು ಹೇಳಿದ್ದರೂ, ನಂತರ ಅವರು ಕೂಡ ವಲಸಿಗರೇ ಎಂದು ತಿಳಿದುಬಂದಿದೆ. ಬಾಂಗ್ಲಾ ದೇಶದವರಿಗೆ ಮನೆ ನೀಡಲು ಸರ್ಕಾರಕ್ಕೆ ಯಾಕೆ ಇಷ್ಟು ಆತುರ? ವೋಟಿಗಾಗಿ ಹೀಗೆ ಮಾಡಿದರೆ ಮುಂದೆ ಅನಾಹುತವಾಗಲಿದೆ ಎಂದರು.

ಗೋವಿಂದರಾವ್‌ ಸಮಿತಿಯ ವರದಿಯಲ್ಲಿ, ಕೋಟ್ಯಂತರ ರೂಪಾಯಿ ಅನುದಾನವಿದ್ದರೂ ಅಭಿವೃದ್ಧಿಯಾಗಿಲ್ಲ ಎನ್ನಲಾಗಿದೆ. ನಂಜುಂಡಪ್ಪ ವರದಿಯಲ್ಲಿ 114 ತಾಲೂಕುಗಳು ಹಿಂದುಳಿದಿವೆ ಎಂದಿತ್ತು. ಸಿದ್ದರಾಮಯ್ಯ 16 ಬಜೆಟ್‌ ಮಂಡಿಸಿದ ನಂತರವೂ ಈ ತಾಲೂಕುಗಳ ಸಂಖ್ಯೆ 177 ಆಗಿದೆ. ಈವರೆಗೆ ಬಿಜೆಪಿ ಎಂಟೂವರೆ ವರ್ಷ ಆಡಳಿತ ನಡೆದಿದೆ. ದೀರ್ಘವಾಗಿ ಕಾಂಗ್ರೆಸ್‌ ಆಡಳಿತ ಮಾಡಿದ್ದರೂ ಅಭಿವೃದ್ಧಿಯಾಗಿಲ್ಲ ಎಂದರು.

Related Articles

Back to top button