*ಭಾರತದ ಸೈನಿಕರು ರೇಪಿಸ್ಟ್ ಗಳು ಎಂದಿದ್ದ ಮಹಿಳೆಗೆ ಸಿದ್ದು ಸರ್ಕಾರದಿಂದ ಆಹ್ವಾನ; ಆರ್.ಅಶೋಕ್ ಆಕ್ರೋಶ*
ಸಂವಿಧಾನ ಸಮಾವೇಶದ ಹೆಸರಲ್ಲಿ ಗಂಜಿ ಗಿರಾಕಿಗಳಿಗೆ ಗಂಜಿ ಗ್ಯಾರೆಂಟಿ ಸಮಾವೇಶ
ಪ್ರಗತಿವಾಹಿನಿ ಸುದ್ದಿ: ಸಂವಿಧಾನ ಸಮಾವೇಶದ ಹೆಸರಿನಲ್ಲಿ ನಗರ ನಕ್ಸಲ್ ಗಳಿಗೆ, ಭಾರತದ ಸೈನಿಕರು ರೇಪಿಸ್ಟ್ ಗಳು ಎನ್ನುವ ವಿಕೃತ ಮನಸ್ಕರಿಗೆ ಸರ್ಕಾರಿ ಖರ್ಚಿನಲ್ಲಿ ವೇದಿಕೆ ಕಲ್ಪಿಸಿಕೊಟ್ಟಿದೆ ಈ ದೇಶದ್ರೋಹಿ ಕಾಂಗ್ರೆಸ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಬರಗಾಲ ಇದ. 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಶರಣಾಗಿದ್ದಾರೆ, ಕೃಷಿ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಮನೆ ಮಠ ಬಿಟ್ಟು ಗುಳೆ ಹೋಗಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ಕುಡಿಯುವ ನೀರಿಗೂ ಜನ ಪರದಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅತಿಥಿಗಳಿಗೆ ಅಂತಾರಾಷ್ಟ್ರೀಯ ವಿಮಾನ ಟಿಕೆಟ್, ಪಂಚತಾರಾ ಹೋಟೆಲ್ ವಾಸ್ತವ್ಯ ಅಂತ ನೂರಾರು ಕೋಟಿ ಸರ್ಕಾರಿ ಹಣ ದುಂದು ವೆಚ್ಚ ಮಾಡಿ ಸಂವಿಧಾನ ಸಮಾವೇಶ ಮಾಡುವ ಅವಶ್ಯಕತೆ ಏನಿತ್ತು ಸಿಎಂ ಸಿದ್ದರಾಮಯ್ಯನವರೇ? ಎಂದು ಪ್ರಶ್ಮಿಸಿದ್ದಾರೆ.
ಪತ್ರಿಕೆಗಳಿಗೆ 21.70 ಕೋಟಿ ರೂಪಾಯಿ ಸೇರಿ ಇತರೆ ಜಾಹೀರಾತುಗಳಿಗೆ 100 ಕೋಟಿ ವೆಚ್ಚ ಮಾಡಿ ಆರ್ಥಿಕ ಬಿಕ್ಕಟಿನಲ್ಲೂ ಪ್ರಚಾರದ ಗೀಳು ಪ್ರದರ್ಶಿಸಿದ್ದೀರಲ್ಲ ಸಚಿವ ಮಹದೇವಪ್ಪ ಅವರೇ, ಇದರಿಂದ ನಿಮ್ಮ ಕಾಂಗ್ರೆಸ್ ಪೋಷಿತ ಗಂಜಿ ಗಿರಾಕಿಗಳಿಗೆ ಲಾಭವೇ ಹೊರತು ಕನ್ನಡಿಗರಿಗೆ ಏನು ಲಾಭ? ನಿಮಗೆ ನಿಜವಾಗಿಯೂ ಸಂವಿಧಾನದ ಬಗ್ಗೆ, ಸಂವಿಧಾನದ ಆಶಯಗಳ ಬಗ್ಗೆ ಗೌರವ ಇದ್ದಿದ್ದರೆ ಇದೇ ಹಣವನ್ನ ಶಾಲಾ – ಕಾಲೇಜುಗಳ ವಿಧ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮಾಡಬಹುದಿತ್ತು. ಅದು ಬಿಟ್ಟು ನಿತಾಶಾ ಕೌಲ್ ರಂತಹ ದೇಶದ್ರೋಹಿಗಳಿಗೆ ಆಹ್ವಾನ ಕೊಟ್ಟಿದ್ದೀರಲ್ಲ ಇದೂ ಸಹ ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಅಪ್ಪಣೆಯಂತೆ ನಡೆದಿದೆಯೋ? ಎಂದು ಕೇಳಿದ್ದಾರೆ.
ಈಗಾಗಲೇ ಅತೃಪ್ತ ಶಾಸಕರನ್ನ ಸಂತೈಸಲು ಗ್ಯಾರೆಂಟಿ ಜಾರಿ ಸಮಿತಿ, ನಿಗಮ ಮಂಡಳಿ, ಸಲಹೆಗಾರರು ಅಂತ 90 ಜನಕ್ಕೆ ಬೇಕಾಬಿಟ್ಟಿ ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದರಿಂದ ಕನ್ನಡಿಗರ ತೆರಿಗೆ ಹಣ ಪೋಲಾಗುತ್ತಿದೆ. ಅದರ ಮೇಲೆ ‘ದುರ್ಭಿಕ್ಷದಲ್ಲಿ ಅಧಿಕ ಮಾಸ’ ಎಂಬಂತೆ ಈ ಪರಿಸ್ಥಿತಿಯಲ್ಲಿ ಸಂವಿಧಾನದ ಹೆಸರಿನಲ್ಲಿ ಕಾಂಗ್ರೆಸ್ ಗಂಜಿ ಗಿರಾಕಿಗಳ ಸಮಾವೇಶ ಯಾಕೆ ಬೇಕಿತ್ತು ಅಂತ ಸಿಎಂ ಸಿದ್ದರಾಮಯ್ಯ ಅವರು ಕನ್ನಡಿಗರಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ