*ಬರ ನೆರವಿಗೆ ಧಾವಿಸದ ಸರಕಾರ ದಿವಾಳಿಯಾಗಿದೆ: ಆರ್.ಅಶೋಕ್*
ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬರ ಪರಿಹಾರ ನೆರವು ಬಿಡುಗಡೆ ವಿಷಯದಲ್ಲಿ ದಿನಕ್ಕೊಂದು ಹೇಳಿಕೆ ನೀಡಿ ಕಾಲಾಹರಣ ಮಾಡುತ್ತಿರುವುದನ್ನು ಗಮನಿಸಿದರೆ ರಾಜ್ಯ ಸರಕಾರ ದಿವಾಳಿ ಆಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಬರಗಾಲ ಕುರಿತ ವಿಶೇಷ ಚೆರ್ಚೆ ಮುಂದುವರಿಸಿ ಗುರುವಾರ ಮಾತನಾಡಿದ ಅವರು, ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಬರಗಾಲದಿಂದ ಕಂಗಾಲಾಗಿರುವ ರೈತ ಸಮುದಾಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಬೆಳೆಗಾರರ ಎರಡು ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಬೇಕು, ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಗಳಿಗೆ ಪರಮಾಧಿಕಾರ ನೀಡಿ ಪ್ರತಿ ತಾಲ್ಲೂಕಿಗೆ ಐದು ಕೋಟಿ ರೂ. ನೀಡಬೇಕು, ಸ್ಥಗಿತಗೊಳಿಸಿರುವ ವಿದ್ಯಾನಿಧಿ ಯೋಜನೆ ಮತ್ತೆ ಆರಂಭಿಸಬೇಕು, ಕುಡಿಯುವ ನೀರು, ಮೇವು ಖರೀದಿ, ಗೋಶಾಲೆ ಆರಂಭಿಸಲು ಅನುದಾನ ನಿಗದಿ ಮಾಡಿ ಆದೇಶಗಳನ್ನು ತಕ್ಷಣವೇ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ನೆರವಿನ ಕಿಸಾನ್ ಸನ್ಮಾನ್ ಯೋಜನೆಗೆ ಕೇಂದ್ರದ ಆರು ಸಾವಿರಕ್ಕೆ ನಮ್ಮ ಸರಕಾರ ನಾಲ್ಕು ಸಾವಿರ ಸೇರಿಸಿ ಹತ್ತು ಸಾವಿರ ರೂ. ನೀಡುತ್ತಿತ್ತು. ಅದನ್ನು ಮತ್ತೆ ಆರಂಭಿಸಬೇಕು. ಬರಗಾಲದ ವೇಳೆ ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು, ಜಾನುವಾರುಗಳಿಗೆ ಬರಗಾಲದಲ್ಲಿ ಬರಬಹುದಾದ ಕಾಯಿಲೆಗಳಿಂದ ರಕ್ಷಿಸಲು ಲಸಿಕೆ ಹಾಕಬೇಕು, ಬಡವರು, ಕೃಷಿ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ನಮ್ಮ ಸರಕಾರ ವಿತರಿಸಿದ್ದಂತೆ ಆಹಾರ ಕಿಟ್ ವಿತರಿಸಬೇಕು ಎಂದೂ ಆಗ್ರಹಿಸಿದರು.
ಆರ್.ಅಶೋಕ್ ಹೇಳಿಕೆ ಹೈಲೈಟ್ಸ್:
ಪದೇ ಪದೇ ಕೇಂದ್ರದ ಕಡೆ ಬೊಟ್ಟು ಮಾಡದೆ ನಮ್ಮ ಸರಕಾರದ ಅವಧಿಯಲ್ಲಿ ನೀಡಿದ್ದಂತೆ ಮಳೆ ಆಶ್ರಿತ, ನೀರಾವರಿ ಮತ್ತು ಬಹು ವಾರ್ಷಿಕ ಬೆಳೆಗಳಿಗೆ ದುಪ್ಪಟ್ಟು ಪರಿಹಾರ ವಿತರಿಸಬೇಕು.
ನಮ್ಮ ಕಾಲದಲ್ಲಿ ಮೇ ತಿಂಗಳಲ್ಲಿ ನೆರೆ ಬಂದಾಗ ಜುಲೈನಲ್ಲಿ ಪರಿಹಾರ ಕೊಟ್ಟಿದ್ವಿ. ಒಂದೇ ತಿಂಗಳಲ್ಲಿ ನಾವು ಪರಿಹಾರ ನೀಡಿರುವಾಗ ನೀವು ಕೊಡಲು ಏನು ದಾಡಿ
ಬರ ಪರಿಹಾರ ವಿತರಣೆ ವಿಷಯದಲ್ಲಿ ರಾಜಕೀಯ ಬೆರೆಸಬಾರದು. ಈಗ ನೀವು ನೆರವಿಗೆ ಮುಂದಾಗದಿದ್ದರೆ ರೈತರು ಆತ್ಮಹತ್ಯೆ ಹಾದಿ ತುಳೆಯುವ ಅಪಾಯ ಎದುರಾಗುತ್ತದೆ. ಗುಳೇ ಹೋಗುವ ಅನಿವಾರ್ಯ ಸ್ಥಿತಿ ಬರುತ್ತದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಿ ರೋಗ ರುಜಿನಗಳ ಹಾವಳಿ ಹೆಚ್ಚಾಗುತ್ತದೆ.
ನಾವು ಅಧಿಕಾರದಲ್ಲಿ ಇದ್ದಾಗ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತಾಯಿ ಹೃದಯದಿಂದ ಸ್ಪಂದಿಸುವ ಕೆಲಸ ಮಾಡಿದ್ದೇವೆ. ನಿಮ್ಮ ವರ್ತನೆ ನೋಡಿದರೆ ಕಟುಕರ ರೀತಿ ಕಾಣುತ್ತಿದೆ.
ನಿಮಗೆ ತೆಲಂಗಾಣ ಚುನಾವಣೆಯಲ್ಲಿ ಇರುವ ಆಸಕ್ತಿ ಬರಪರಿಸ್ಥಿತಿ ನಿಭಾಯಿಸುವ ವಿಷಯದಲ್ಲಿ ಇಲ್ಲ. ಅನೇಕ ಸಚಿವರು ಇನ್ನೂ ಹೈದರಾಬಾದ್ ನಲ್ಲೇ ವಾಸ್ತವ್ಯ ಹೂಡಿದ್ದಾರೆ.
ಹದಿನಾಲ್ಕು ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಪರಿಸ್ಥಿತಿ ಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ನಮ್ಮ ನಿರೀಕ್ಷೆ ತಲೆಕೆಳಗಾಗಿದೆ.
ಅವರ ಆರ್ಥಿಕ ಚಾಣಾಕ್ಷತೆ ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವುದರಲ್ಲೇ ಹೆಚ್ಚು ಸಾಧನೆ ಮಾಡಿದೆ. ಗ್ಯಾರೆಂಟಿ ಹೆಸರಿನಲ್ಲಿ ಕೊಟ್ಟು ಹಾಲಿನಿಂದ ಆಲ್ಕೊಹಾಲ್ ವರೆಗೆ, ಮಾರ್ಗಸೂಚಿ ದರ ಸೇರಿದಂತೆ ಎಲ್ಲದರ ಮೇಲೂ ಹೆಚ್ಚಳದ ಬರೆ ಹಾಕಿದ್ದಾರೆ. ಮತ್ತೆ ಈಗ ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಸಿದ್ಧತೆ ನಡೆಸಿದ್ದಾರೆ.
ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದಾಗ ಯುಪಿಎ ಸರಕಾರದ ಅವಧಿಗಿಂತ ಎನ್ ಡಿಎ ಅವಧಿಯಲ್ಲೇ ಅತಿ ಹೆಚ್ಚು ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಿರುವುದನ್ನು ದಾಖಲೆಗಳು ಸಾಬೀತುಪಡಿಸಿವೆ.
ತಾಲ್ಲೂಕುವಾರು ಪರಿಹಾರಕ್ಕೆ ಎಷ್ಟು ಹಣ ಬಿಡುಗಡೆ ಮಾಡುತ್ತೀರಿ? ಅದನ್ನು ಯಾವುದಕ್ಕೆ ಬಳಸಬೇಕು? ಅದಕ್ಕೆ ಸಂಬಂಧಿಸಿದ ಆದೇಶಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು.
ರಾಜ್ಯದ ಜನತೆ ಸಂಕಷ್ಟದ ಸಮಯದಲ್ಲಿ ಇರುವಾಗ ನೀವು ಸ್ಪಂದಿಸದಿದ್ದರೆ ಅವರ ಶಾಪ ನಿಮಗೆ ತಟ್ಟುತ್ತದೆ. ಈಗಲಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಿ
ಈ ಸಂದರ್ಭದಲ್ಲಿ ಬೀಚಿ ಅವರು ಹೇಳಿರುವ ಮಾತು ನೆನಪಿಗೆ ಬರುತ್ತಿದೆ, ” ಪ್ರತಿಯೊಬ್ಬ ಜಾಣನಿಗೂ ಅಹಂಕಾರ ಇದ್ದೆ ಇರುತ್ತದೆ, ತಾನೊಬ್ಬ ಕೋಣನೆಂದು ತಿಳಿಯುವವರೆಗೂ” ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ