ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಮಂತ್ರಿ ಪದವಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತ ಸಧ್ಯ ಬಿಜೆಪಿಗೆ ಬಂದಿದ್ದ ಮಾಜಿ ಸಚಿವ ಆರ್.ಶಂಕರ ಸ್ಥಿತಿ ಈಗ ಅಧೋಗತಿ. ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರರಾಗಿ 2018ರ ಚುನಾವಣೆಯಲ್ಲಿ ಗೆದ್ದಿದ್ದ ಶಂಕರ್, ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದರು. ಅನೇಕ ಬಾರಿ ಪಕ್ಷ ನಿಷ್ಠೆ ಬದಲಿಸಿದ್ದ ಅವರು ಇದೀಗ ಬಿಜೆಪಿ ಬೆಂಬಲಿಸಿ ನಿನ್ನೆಯಷ್ಟೆ ಪಕ್ಷ ಸೇರಿದ್ದರು.
ಆದರೆ ರಾಣೆಬೆನ್ನೂರು ಕ್ಷೇತ್ರಕ್ಕೆ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದೆ. ಅರುಣ ಕುಮಾರ ಪೂಜಾರ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದರಿಂದಾಗಿ ಆರ್.ಶಂಕರ ಕಂಗಾಲಾಗಿದ್ದಾರೆ. ಅವರ ನೂರಾರು ಬೆಂಬಲಿಗರು ಬೆಂಗಳೂರಿಗೆ ಇಂದು ಬೆಳಗ್ಗೆ ಧಾವಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ಆರಂಭಿಸಿದ್ದರು.
ಬೆಳಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಂಕರ್ ಯಡಿಯೂರಪ್ಪ ಜೊತೆ ಚರ್ಚಿಸಿದರು. ಹೊರಗೆ ಬಂದ ಅವರು, ಟಿಕೆಟ್ ಕೊಡದಿದ್ದರೆ ನಾನು ಬಿಜೆಪಿಗೆ ರಾಜಿನಾಮೆ ನೀಡಬೇಕೆಂದು ನಿರಧರಿಸಿದ್ದೆ. ಆದರೆ ನನ್ನನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಿ ಮಂತ್ರಿ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಅದಕ್ಕೆ ಒಪ್ಪಿಕೊಂಡಿದ್ದೇನೆ. ಹಾಗಾಗಿ ಬಿಜೆಪಿಯಿಂದ ಯಾರಿಗೇ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದರು.
ಕೆರಳಿದ ಬೆಂಬಲಿಗರು
ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿ ಹೊರಗೆ ಬಂದ ಶಂಕರ್ ಮಾತು ಕೇಳಿ ಅವರ ಬೆಂಬಲಿಗರು ಕೆರಳಿ ಕೆಂಡವಾದರು. ನಮ್ಮನ್ನೆಲ್ಲ ಇಲ್ಲೇ ಬಿಟ್ಟು ನೀವು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅವರು ಹೇಳಿದ್ದಕ್ಕೆ ಒಪ್ಪಿಕೊಂಡು ಬಂದಿದ್ದೀರಿ. ಕಾರ್ಯಕರ್ತರಿಗೆ ಏನು ಬೆಲೆ ಕೊಟ್ಟಂತಾಯಿತು? ಇನ್ನು ಮುಂದೆ ನಾವು ನಿಮ್ಮ ಜೊತೆಗೆ ಇರುವುದಿಲ್ಲ ಎಂದು ಎಚ್ಚರಿಸಿದರು. ಕೆಲವರು ಕಣ್ಣೀರು ಹಾಕಿದರು.
ಆದರೆ ಯಡಿಯೂರಪ್ಪ ಮಾತಿಗೆ ತಲೆದೂಗಿ ಬಂದಿದ್ದ ಶಂಕರ್ ಕಾರ್ಯಕರ್ತರ ಪ್ರಶ್ನೆಗಳನ್ನು ಎದುರಿಸಲಾಗದೆ ಅಲ್ಲಿಂದ ಕಾರು ಹತ್ತಿ ತೆರಳಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, ನಾನು ಶಂಕರ್ ಅವರಿಗೆ ಮಾತು ಕೊಟ್ಟಿದ್ದೇನೆ, ಅವರನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುತ್ತೇನೆ. ನಾನು ಯಾರಿಗೇ ಆಗಲಿ ಮಾತು ಕೊಟ್ಟರೆ ಮರೆಯುವುದಿಲ್ಲ. ಖಂಡಿತ ಅವರನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದರು.
ಒಟ್ಟಾರೆ, ಶಂಕರ ಸ್ಥಿತಿ ಇಂಗು ತಿಂದ ಮಂಗನಂತಾಯಿತೆ? ಸಿಕ್ಕಿದ್ದ ಮಂತ್ರಿಗಿರಿಯನ್ನೂ , ಇದ್ದ ಶಾಸಕ ಸ್ಥಾನವನ್ನೂ ಕಳೆದುಕೊಂಡು ಅತಂತ್ರರಾಗಿದ್ದಾರೆ. ಸಧ್ಯ ಯಾವುದೇ ಸ್ಥಾನ ಖಾಲಿ ಇಲ್ಲದ್ದರಿಂದ ವಿಧಾನಪರಿಷತ್ ಸದಸ್ಯರಾಗುವುದು ಸಧ್ಯಕ್ಕಂತೂ ಸಾಧ್ಯವಿಲ್ಲ. ಮುಂದೆ ಯಾವಾಗ ಎಂಎಲ್ಸಿ ಆಗುತ್ತಾರೋ… ಯಾವಾಗ ಮಂತ್ರಿಯಾಗುತ್ತಾರೋ… ಕಾದು ನೋಡಬೇಕಿದೆ.
ಪ್ರಕಾಶ ಹುಕ್ಕೇರಿ ಕಾಗವಾಡಕ್ಕೆ, ರಾಜು ಕಾಗೆ ಅಥಣಿಗೆ?
ಬಿಜೆಪಿ ಸೇರಿದ ಅನರ್ಹ ಶಾಸಕರು: 13 ಜನರಿಗೆ ಟಿಕೆಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ