Kannada NewsKarnataka News

ಕಳಚಿದ ಸಮಾಜವಾದದ ಕೊಂಡಿ, ಬಾರದ ಲೋಕಕ್ಕೆ ರಾಚಪ್ಪ ಹಡಪದ

 ‌ಚನ್ನಮ್ಮ ಕಿತ್ತೂರು ತಾಲೂಕಿನ ಹೊಳೆಹೂಸುರ ಗ್ರಾಮದವರಾದ ರಾಚಪ್ಪ ಹಡಪದ ಅವರು ರಾಜೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಇವರ ಸಮಾಜ ಸೇವೆ ಗುರುತಿಸಿ ಸರ್ಕಾರ ಪ್ರಶಸ್ತಿ ನೀಡಿರುವುದು ಪ್ರಶಸ್ತಿಗೆ ಮೌಲ್ಯ ಬಂದಿತ್ತು. ಮೂಲತಃ ಇವರು ಲೋಹಿಯಾ ವಿಚಾರವನ್ನು ಮೈಗೂಡಿಸಿಕೊಂಡು ಬೆಳೆದ ನೊಂದ ಜೀವಿ.
ವೃತ್ತಿಯಿಂದ ಇವರದು ಕ್ಷೌರಿಕ ವೃತ್ತಿ. ಧಾರವಾಡದಲ್ಲಿ ಇವರು ನಡೆಸುತ್ತಿದ್ದ ಸಮತಾ ಹೆಸರಿನ ಕ್ಷೌರಿಕ  ಅಂಗಡಿ ಹಲವಾರು ಬೆಳವಣಿಗೆಗೆ ಪ್ರೇರಣೆ ಯಾಗಿದೆ. ಜಾರ್ಜ್‌ ಫರ್ನಾಂಡಿಸ್ ರವರು (ಮಾಜಿ ರಕ್ಷಣಾ ಮಂತ್ರಿಗಳು) ಸ್ಥಾಪಿಸಿದ ಸಮತಾ ಪಕ್ಷಕ್ಕೆ ಹೆಸರು ಬರಲು ರಾಚಪ್ಪ ಹಡಪದರವರು ನಡೆಸುತ್ತಿದ್ದ ಸಮತಾ ಕ್ಷೌರಿಕ ಅಂಗಡಿಯೆ ಕಾರಣ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ರೈತ ಸಂಘ ಗಟ್ಟಿಯಾಗಿ ಬೇರು ಬಿಡಲು ಕಾರಣಿಭೂತರಾದವರು ರಾಚಪ್ಪ ಹಡಪದರವರು. ರಾಷ್ಟ್ರೀಯ ರೈತ ನಾಯಕರಾದ ಕಿಶನ್ ಪಟ್ನಾಯಕ ಮತ್ತು ಜಾರ್ಜ್‌ ಫರ್ನಾಂಡಿಸ್ ರವರೊಡನಾಡಿಯಾಗಿದ್ದರು. ರಾಜ್ಯದ ಶ್ರೇಷ್ಠ ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲಗೌಡರ ಪರಮ ಶಿಷ್ಯರು. ರಾಜ್ಯದ ಏಳು ಜನ ಮುಖ್ಯಮಂತ್ರಿಗಳೊಡನೆ ನಿಕಟ ಒಡನಾಟ ಹೂಂದಿದವರು. ನಿಕಟ ಪೂರ್ವ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಅತೀ ಹತ್ತಿರದ ಒಡನಾಡಿ. ಆದರೆ ನಿಷ್ಠುರ ಸ್ವಭಾವದವರಾದ ಕಾರಣ ಎಲ್ಲರೂ ಇವರಿಗೆ ಅಧಿಕಾರ ನೀಡಲು ಹಿಂಜರಿದರು.
ಜಾರ್ಜ ಫರ್ನಾಂಡಿಸ್ ಮತ್ತುಕಿಶನ್ ಪಟ್ನಾಯಕರನ್ನು ಕಿತ್ತೂರಿಗೆ  ಕರೆದು ಕೊಂಡು ಬಂದವರು. ಜಾರ್ಜ್ ಫರ್ನಾಂಡಿಸ್ ರವರು ದೇಶದ ರಕ್ಷಣಾ ಮಂತ್ರಿಗಳಾಗಿದ್ದಾಗ ಧಾರವಾಡದ ಇವರ ಗುಡಿಸಲು ನಿವಾಸಕ್ಕೆ ಬಂದು ಎರಡು ಗಂಟೆಗಳ ಕಾಲ ಇವರ ಜೊತೆ ಹರಟೆ ಹೊಡೆದು ಹೋಗಿರುವದನ್ನು ಡಾ.ಜಗದೀಶ ಹಾರೂಗೊಪ್ಪ ಸ್ಮರಿಸುತ್ತಾರೆ.
ಇಷ್ಟೆಲ್ಲಾ ದೈತ್ಯ ನಾಯಕರ ಒಡನಾಟ ಹೂಂದಿದ್ದರೂ ಸ್ವಂತಕ್ಕೆ ಎನ್ನನ್ನೂ ಮಾಡಿಕೊಳ್ಳದ ಇವರು ಸಿದ್ದಾಂತಕ್ಕಾಗಿ ತಮ್ಮ ಆಸ್ಥಿಯನ್ನು ಮಾರಿದರು.ಇವತ್ತು ಧಾರವಾಡದಲ್ಲಿ ಇವರನ್ನು ಅರ್ಥ ಮಾಡಿಕೊಂಡ ಸ್ನೆಹಿತರು ಅಕ್ರಮ ಸಕ್ರಮದಲ್ಲಿ ಇವರಿಗೆ ಮನೆಯೂಂದನ್ನು ನಿರ್ಮಿಸಿ ಕೊಟ್ಟಿದ್ದಾರೆ. ಶಾಂತವೇರಿ ಗೋಪಾಲಗೌಡರ ಒಡನಾಡಿ, ಗೋಕಾಕ ಚಳುವಳಿ, ಕಾಗೋಡಿನಲ್ಲಿ ನಡೆದ ಭೂ ಸತ್ಯಾಗ್ರಹ, ಹೆಬ್ಬಳ್ಳಿಯ ಗೇಣಿದಾರರ ಪರವಾದ ಹೋರಾಟ, ಜೆಪಿ ಚಳುವಳಿ ಸೇರಿದಂತೆ ಹತ್ತು ಹಲವು ಜನಪರ ಸಮಾಜಪರ ಹೋರಾಟಗಳಲ್ಲಿ ತೊಡಗಿಸಿಕೊಂಡ ಬಸವಶಾಂತಿ ಪ್ರಶಸ್ತಿ, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಮತ್ತು  ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜವಾದಿ ಹೋರಾಟಗಾರ ರಾಚಪ್ಪ ಹಡಪದ ಅವರಿಗೆ ಅಂತಿಮ ನಮನಗಳು.
ಲೇಖನ: ಮಹೇಶ ನೀಲಕಂಠ ಚನ್ನಂಗಿ
ಮುಖ್ಯ ಶಿಕ್ಷಕರು, ಚನ್ನಮ್ಮನ ಕಿತ್ತೂರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button