*ಸಚಿವ ಜಮೀರಗೆ 2 ಕೋಟಿ ಸಾಲ ಕೊಟ್ಟಿದ್ರಂತೆ: ಲೋಕಾಯಕ್ತರಿಗೆ ರಾಧಿಕಾ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಜಮೀರ್ ಖಾನ್ ಅವರಿಗೆ ಸಂಕಷ್ಟ ಸಂದರ್ಭದಲ್ಲಿ ಆರ್ಥಿಕ ನೆರವಿನ ರೂಪದಲ್ಲಿ 2 ಕೋಟಿ ಸಾಲ ಕೊಟ್ಟಿದ್ದಾಗಿ ನಟಿ ರಾಧಿಕಾ ಕುಮಾರಸ್ವಾಮಿ ಲೋಕಾಯಕ್ತ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ಕೊಟ್ಟಿದ್ದಾರೆ.
ರಾಜ್ಯದ ಅಲ್ಪಸಂಖ್ಯಾತರ ಪ್ರಮುಖ ನಾಯಕ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ದಶಕದ ಹಿಂದೆ ನಟಿ ರಾಧಿಕಾ ಕುಮಾರಸ್ವಾಮಿ ಅವರು 2 ಕೋಟಿ ರೂ. ಸಾಲ ಕೊಟ್ಟಿದ್ದರು ಎಂಬ ವಿಷಯ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.
ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು, ವಸತಿ ಸಚಿವರ ಆದಾಯದ ಮೂಲಗಳನ್ನು ಶೋಧಿಸಿದಾಗ ಸಾಲ ಕೊಟ್ಟವರ ಪಟ್ಟಿ ಸಿಕ್ಕಿದೆ. ಇದರಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಉಲ್ಲೇಖವಾಗಿತ್ತು.
ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ರಾಧಿಕಾ ಕುಮಾರಸ್ವಾಮಿ ಅವರಿಂದ ಲೋಕಾಯುಕ್ತ ಪೊಲೀಸರು ವಿವರಣೆ ಸಹ ಪಡೆದುಕೊಂಡಿದ್ದಾರೆ. ತಾವು ಸಚಿವ ಜಮೀರ್ ಅವರಿಗೆ ಸಾಲ ಕೊಟ್ಟಿದ್ದನ್ನು ಅವರು ಒಪ್ಪಿಕೊಂಡು ಅಧಿಕೃತ ಹೇಳಿಕೆ ದಾಖಲಿಸಿದ್ದಾರೆ 2019ರಲ್ಲಿ ಐ ಮಾನಿಟರಿ ಅಡ್ಡೆಸರಿ ಕಂಪನಿಯ ಬಹುಕೋಟಿ ವಂಚನೆ ಹಗರಣ ಬೆಳಕಿಗೆ ಬಂದಾಗ ಆ ವಂಚಕ ಕಂಪನಿ ಜತೆ ನಂಟು ಹೊಂದಿದ್ದ ಆರೋಪದ ಮೇರೆಗೆ ಜಮೀರ್ ಖಾನ್ ಅವರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿತ್ತು.
ಬಳಿಕ ಇ.ಡಿ. ವರದಿ ಆಧರಿಸಿ ಆಗಿನ ಮೈತ್ರಿ ಸರ್ಕಾರದಲ್ಲೂ ಸಚಿವರಾಗಿದ್ದ ಜಮೀರ್ ಖಾನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಅಂದು ಅಸ್ತಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಪ್ರಕರಣ ದಾಖಲಿಸಿತ್ತು.
ಎಸಿಬಿ ರದ್ದುಗೊಂಡ ಬಳಿಕ ಪ್ರಕರಣದ ತನಿಖೆಯೂ ಲೋಕಾಯುಕ್ತ ಪೊಲೀಸರಿಗೆ ವರ್ಗವಾಯಿತು. ಈಗ ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಸಚಿವ ಜಮೀರ್ ಸೇರಿ ಹಲವು ಜನರ ವಿಚಾರಣೆ ನಡೆದಿದೆ.
ತಾವು ಯಾರಿಂದೆಲ್ಲ ಸಾಲ ಪಡೆದಿರುವ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಲಿಖಿತವಾಗಿ ಸಚಿವ ಜಮೀರ್ ಪಟ್ಟಿ ಕೊಟ್ಟಿದ್ದರು. ನಟಿ ರಾಧಿಕಾ ಕುಮಾರಸ್ವಾಮಿ ಅವರಿಂದ ಎರಡು ಕೋಟಿ ರೂ. ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದರು.
ಈ ಹಿನ್ನೆಲೆಯಲ್ಲಿ ಲೋಕಾಯಕ್ತ ಪೊಲೀಸರ ಮುಂದೆ ಹಾಜರಾದ ಅವರು, ಜಮೀರ್ ಖಾನ್ ಅವರಿಗೆ ಸಂಕಷ್ಟ ಸಂದರ್ಭದಲ್ಲಿ ಆರ್ಥಿಕ ನೆರವಿನ ರೂಪದಲ್ಲಿ ಸಾಲ ಕೊಟ್ಟಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ.