ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ ನಟಿ ರಾಗಿಣಿ ದ್ವಿವೇದಿ, ಇತ್ತೀಚೆಗೆ ಬಿಡುಗಡೆಯಾಗಿದ್ದು, ಜೈಲಿಂದ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಕೆಲ ಸಂದರ್ಭಗಳು ನಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತವೆ. ಆ ಸಮಯದಲ್ಲಿ ನಮಗೆ ಗೊತ್ತಿರುವುದೂ ಇಲ್ಲ ಹಾಗೇ ನಾವು ಪರೀಕ್ಷೆಗೆ ಒಳಪಡುತ್ತೇವೆ. ಅಂಥ ಸಂದರ್ಭದಲ್ಲಿ ನಾವು ಮತ್ತಷ್ಟು ಗಟ್ಟಿಯಾಗುತ್ತೇವೆ. ನೀವು ಸರಿಯಿದ್ದಾಗ ಬೇರೆಯವರಿಗೆ ಯಾವುದನ್ನೂ ವಿವರಿಸುವ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ಸಮಯ ಎಲ್ಲವನ್ನೂ ಗುಣಪಡಿಸುತ್ತೆ, ಎಲ್ಲವನ್ನೂ ಸರಿಮಾಡುತ್ತೆ ಎಂಬ ಮಾತಿದೆ ಹಾಗೇ ನನಗೂ ಸ್ವಲ್ಪ ಸಮಯಕೊಡಿ ನಾನೂ ಕೂಡ ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಜೊತೆ ಮಾತನಾಡಬೇಕು ಎಂದುಕೊಂಡಿದ್ದೆ. ಆದರೆ ಏನು ಮಾತನಾಡುವುದು ಎಂದು ತುಂಬಾ ಯೋಚನೆ ಮಾಡಿದ್ದೆ. ಕೆಲವೊಮ್ಮೆ ಶಾಂತವಾಗಿರೋದು ಉತ್ತಮ ಎನಿಸುತ್ತೆ. ಸುಮ್ಮನೆ ಶಾಂತಿಯಿಂದ ಇದ್ದರೆ ನಮ್ಮಲ್ಲೇ ಉತ್ತರಗಳು ಸಿಗುತ್ತಿರುತ್ತವೆ. ಕೆಲವರು ಪಾಸಿಟೀವ್ ಮೆಸೇಜ್ ಕಳಿಸಿದರೆ ಇನ್ನು ಕೆಲವರು ನನ್ನ ಬಗ್ಗೆ ನೆಗೆಟೀವ್ ಮೆಸೆಜ್ ಮಾಡಿದ್ದಾರೆ. ಅದರಿಂದ ನಿಮಗೆ ಖುಷಿ ಸಿಗುತ್ತೆ ಎನ್ನುವುದಾದರೆ ನಾನು ಆ ರೀತಿಯಲ್ಲಾದರೂ ಖುಷಿ ನೀಡಿದ್ದೇನೆ ಎನ್ನುವ ಪಾಸಿಟಿವಿಟಿ ಬೆಳೆಸಿಕೊಂಡಿದ್ದೇನೆ ಎಂದಿದ್ದಾರೆ.
ನನ್ನ ತಂದೆ-ತಾಯಿ ನನ್ನ ಎಲ್ಲಾ ಸಮಯದಲ್ಲೂ ಜೊತೆಯಲ್ಲಿ ನಿಂತಿದ್ದಾರೆ. ಮಕ್ಕಳು ತಪ್ಪು ಮಾಡಲಿ, ಮಾಡದೇ ಇರಲಿ ತಂದೆ-ತಾಯಿ ಕಡೆಯಿಂದ ಸಪೋರ್ಟ್ ಇದ್ದರೆ ಅದೇ ಮಕ್ಕಳಿಗೆ ಶಕ್ತಿ. ನನ್ನ ತಂದೆ ತಾಯಿ ನನ್ನ ಕಷ್ಟದ ಸಂದರ್ಭಗಳಲ್ಲೂ ಜೊತೆಯಲ್ಲಿರುವುದೇ ನನಗೆ ಸ್ಟ್ರೆಂಥ್ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ