ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲು ” ನೀರು ವಿನಿಮಯ ಒಪ್ಪಂದ” ಮಾಡಿಕೊಳ್ಳಲು ಮಹಾರಾಷ್ಟ್ರವು ಕರ್ನಾಟಕದ ಮುಂದಿಟ್ಟಿರುವ ಪ್ರಸ್ತಾವನೆಯನ್ನು ಯಥಾವತ್ತಾಗಿ ಒಪ್ಪಿಕೊಳ್ಳದೇ ಕರ್ನಾಟಕದ ಹಿತದೃಷ್ಟಿಯಿಂದ ಸ್ವಲ್ಪ ಬದಲಾವಣೆ ಮಾಡಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಆಗ್ರಹಿಸಿದೆ.
ಇಂದು ಬೆಳಗಾವಿಯ ನೀರಾವರಿ ಮುಖ್ಯ ಅಭಿಯಂತರ ಕಚೇರಿಯಲ್ಲಿ ಜನಪ್ರತಿನಿಧಿಗಳ ಸಭೆಯ ನಂತರ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಯಿತು.
ಕೊಯ್ನಾದಿಂದ ಕೃಷ್ಣೆಗೆ ಬಿಡುಗಡೆ ಮಾಡುವ ನೀರಿನ ಬದಲಾಗಿ ವಿಜಯಪುರ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಜತ್ತ ಪ್ರದೇಶಕ್ಕೆ ನೀರು ಪೂರೈಸಬೇಕೆಂದು ಮಹಾರಾಷ್ಟ್ರವು ಶರತ್ತು ವಿಧಿಸಿದೆ.ಏತ ನೀರಾವರಿ ಯೋಜನೆಗೆ ಆಲಮಟ್ಟಿಯ ಜಲಾಶಯದಿಂದ 6.5 ಟಿ ಎಮ್.ಸಿ.ನೀರು ಹಂಚಿಕೆಯಾಗಿದ್ದು 52 ಸಾವಿರ ಹೆಕ್ಟೆರ್ ಜಮೀನನ್ನು ನೀರಾವರಿಗೆ ಒಳಪಡಿಸುವ ಉದ್ದೇಶವಿದೆ.ಒಂದು ವೇಳೆ ಜತ್ತ ಪ್ರದೇಶಕ್ಕೆ ಇಲ್ಲಿಂದಲೇ ನೀರು ಪೂರೈಸುವದಾದರೆ ನಮ್ಮ ಯೋಜನಾ ಪ್ರದೇಶಕ್ಕೆ ಹೊಡೆತ ಬೀಳಲಿದೆ.ಆದ್ದರಿಂದ ಒಪ್ಪಂದದಲ್ಲಿ ” ಹೆಚ್ಚುವರಿ ನೀರಿನ ಲಭ್ಯತೆಯನ್ನು ಆಧರಿಸಿ” ಎಂಬ ಅಂಶವನ್ನು ಸೇರಿಸಬೆಕೆಂದು ಕ್ರಿಯಾ ಸಮಿತಿಯು ತನ್ನ ಮನವಿಯಲ್ಲಿ ತಿಳಿಸಿದೆ.
ಮಹಾದಾಯಿ ನ್ಯಾಯಮಂಡಳಿಯು ತನ್ನ ತೀರ್ಪು ನೀಡಿ ಎಂಟು ತಿಂಗಳಾದರೂ ಕೇಂದ್ರವು ಅಧಿಸೂಚನೆ ಹೊರಡಿಸಿಲ್ಲ.ಕಳಸಾ ನಾಲೆಯಿಂದ ರಾಜ್ಯಕ್ಕೆ ಹಂಚಿಕೆಯಾದ 2.72 ಟಿ ಎಮ್ ಸಿ ನೀರಿನ ಬಳಕೆಗಾಗಿ ರಾಜ್ಯ ಸರಕಾರವು ಸಮಗ್ರ ಯೋಜನಾ ವರದಿ ( ಡಿಪಿಆರ್) ಯನ್ನು ತುರ್ತಾಗಿ ಸಿದ್ಧಪಡಿಸಬೇಕೆಂದೂ ಸಚಿವರನ್ನು ಒತ್ತಾಯಿಸಲಾಯಿತು.
ಒಂದೇ ತಿಂಗಳಲ್ಲಿ ಮೇಕೆದಾಟು ಯೋಜನೆಯ ಆರು ಸಾವಿರ ಕೋಟಿ ರೂ.ಗಳ ಡಿಪಿಆರ್ ನ್ನು ರಾಜ್ಯ ಸರಕಾರ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿದೆ. ಆ ಯೋಜನೆಗೆ ನೀಡಿದ ಆದ್ಯತೆಯನ್ನು ಕಳಸಾ ಬಂಡೂರಿ ಯೋಜನೆಗೂ ನೀಡಬೇಕೆಂದು ಸಚಿವರನ್ನು ಆಗ್ರಹಿಸಲಾಯಿತು.
ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಎಮ್.ಜಿ.ಮಕಾನದಾರ, ಸಲೀಮ್ ಖತೀಬ, ವಿರೇಂದ್ರ ಗೋಬರಿ ಮತ್ತಿತರರು ಸಚಿವರನ್ನು ಭೆಟ್ಟಿಯಾಗಿದ್ದರು.