ನಾಳೆ ಬೆಳಗಾವಿಗೆ ರಾಹುಲ್ ಗಾಂಧಿ: 4ನೇ ಗ್ಯಾರಂಟಿ ಘೋಷಣೆ ಸಾಧ್ಯತೆ; ಕೆಲವೇ ಕ್ಷಣಗಳಲ್ಲಿ ಪೂರ್ವಭಾವಿ ಸಭೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸೋಮವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಬೆಳಗಾವಿಯಲ್ಲಿ ಯುವಕ್ರಾಂತಿ ಸಮಾವೇಶ ನಡೆಸಲಿದ್ದಾರೆ.
ಸೋಮವಾರ ಮಧ್ಯಾಹ್ನ 12.30ಕ್ಕೆ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಸಮಾವೇಶದ ಸ್ಥಳ ನಗರದ ಸಿಪಿಎಡ್ ಮೈದಾನಕ್ಕೆ ಆಗಮಿಸಲಿದ್ದಾರೆ. 1 ಗಂಟೆಯಿಂದ 3.30ರ ವರೆಗೆ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಂಡು ಪುನಃ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿ ನವದೆಹಲಿಗೆ ವಾಪಸ್ಸಾಗಲಿದ್ದಾರೆ.
ಕಾಂಗ್ರೆಸ್ ಯುವ ಸಮಾವೇಶದಲ್ಲಿ ಸುಮಾರು 2 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಭಾಗವಹಿಸಲಿದ್ದಾರೆ. ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳುವರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೆ ಕಾಂಗ್ರೆಸ್ ಮೂರು ಗ್ಯಾರಂಟಿಗಳನ್ನು ಘೋಷಿಸಿದ್ದು, ರಾಹುಲ್ ಗಾಂಧಿಯವರ ಮೂಲಕ ನಾಳೆ ನಾಲ್ಕನೇ ಗ್ಯಾರಂಟಿ ಘೋಷಿಸುವ ಸಾಧ್ಯತೆ ಇದೆ. ಯುವಕರಿಗೆ ಉದ್ಯೋಗ ಭರವಸೆ ಅಥವಾ ನಿರುದ್ಯೋಗಿಗಳಿಗೆ ಭತ್ಯೆಯಂತಹ ಘೋಷಣೆಯ ನಿರೀಕ್ಷೆ ಇದೆ.
ಈಗಾಗಲೆ, 200 ಯುನಿಟ್ ವರೆಗೆ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ಹಾಗೂ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯ ಗ್ಯಾರಂಟಿಯನ್ನು ಕಾಂಗ್ರೆಸ್ ನೀಡಿದೆ. ಸೋಮವಾರ ನಾಲ್ಕನೇ ಗ್ಯಾರಂಟಿ ಘೋಷಣೆಯಾಗುವ ಸಾಧ್ಯತೆ ಇದೆ.
ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನ ಸಭೆ ಕ್ಷೇತ್ರಗಳಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ 8 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ಆದರೆ ನಂತರ ನಡೆದ ಆಪರೇಶನ್ ಕಮಲದಲ್ಲಿ ಮೂವರು ಬಿಜೆಪಿಗೆ ಜಿಗಿದಿದ್ದರು. ಸಧ್ಯ ಕಾಂಗ್ರೆಸ್ ನಲ್ಲಿ 5 ಶಾಸಕರಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಬೆಳಗಾವಿ ಜಿಲ್ಲೆಯನ್ನು ಮತ್ತೆ ಕೈ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಕನಿಷ್ಟ 10 -12 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಸತೀಶ್ ಜಾರಕಿಹೊಳಿ ವ್ಯಕ್ತಪಡಿಸಿದ್ದಾರೆ.
ಪೂರ್ವಭಾವಿ ಸಭೆ
ಸೋಮವಾರ ಬೆಳಗಾವಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಯುವಕ್ರಾಂತಿ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇನ್ನು ಕೆಲವೇ ಕ್ಷಣಗಳಲ್ಲಿ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಹುಬ್ಬಳ್ಳಿ ಮೂಲಕ ಬೆಳಗಾವಿಗೆ ಆಗಮಿಸಲಿರುವ ಡಿ.ಕೆ.ಶಿವಕುಮಾರ 3 ಗಂಟೆಗೆ ಸಭೆ ಆಯೋಜಿಸಿದ್ದಾರೆ. ಪಕ್ಷದ ಜಿಲ್ಲೆಯ ಎಲ್ಲ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಗುರುವಾರ ಸಹ ಈ ಎಲ್ಲ ಮುಖಂಡರು ಮೊದಲ ಪೂರ್ವಭಾವಿ ಸಭೆ ನಡೆಸಿದ್ದಾರೆ. ಸಿಪಿಎಡ್ ಮೈದಾನದಲ್ಲಿ ಈಗಾಗಲೆ ಎಲ್ಲ ಸಿದ್ಧತೆಗಳು ನಡೆದಿವೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮೊದಲಾದವರು ನಿರಂತರವಾಗಿ ಸಮಾವೇಶದ ಸಿದ್ಧತೆ ಪರಿಶೀಲಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ರಾಹುಲ್ ಗಾಂಧಿಯವರ ರೋಡ್ ಶೋ ನಡೆಸಲು ಮೊದಲು ಯೋಚಿಸಲಾಗಿತ್ತಾದರೂ ನಂತರದಲ್ಲಿ ಅದನ್ನು ಕೈ ಬಿಡಲಾಗಿದೆ. ಕೇವಲ ಸಮಾವೇಶಕ್ಕೆ ಮಾತ್ರ ಕಾರ್ಯಕ್ರಮ ಸೀಮಿತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ