ಪ್ರಗತಿವಾಹಿನಿ ಸುದ್ದಿ; ನೊಯ್ಡಾ: ಹತ್ರಾಸ್ ನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಕುಟುಂಬದ ಭೇಟಿಯಾಗಿ ಸಾಂತ್ವನ ಹೇಳಲು ತೆರಳುತ್ತಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಉತ್ತರ ಪ್ರದೇಶದ ಪೊಲೀಸರು ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ತಡೆದಿದ್ದಾರೆ.
ಸಂತ್ರಸ್ತ ಯುವತಿ ಕುಟುಂಬಸ್ಥರನ್ನು ಭೇಟಿಯಾಗಲು ಇಂದು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನೂನಾರು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಹತ್ರಾಸ್ ಗೆ ತೆರಳುತ್ತಿದ್ದರು. ಈ ವೇಳೆ ರಾಹುಲ್ ಗಾಂಧಿ ಕಾರನ್ನು ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಯುಪಿ ಪೊಲೀಸರು ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ರಾಹುಲ್ ಗಾಂಧಿ ಕಾರನ್ನು ಇಳಿದು ನಡೆದುಕೊಂಡೇ ಹತ್ರಾಸ್ ಗೆ ತೆರಳಲು ಮುಂದಾಗಿದ್ದಾರೆ. ನಡೆದು ಮುಂದೆ ಸಾಗುತ್ತಿದ್ದ ರಾಹುಲ್ ಗಾಂಧಿಯನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಪೊಲೀಸರು ಹಾಗೂ ರಾಹುಲ್ ಗಾಂಧಿ ಮಧ್ಯೆ ತಳ್ಳಾಟ-ನೂಕಾಟ ಕೂಡ ನಡೆದಿದೆ. ಈ ವೇಳೆ ಪೊಲೀಸರು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಪೊಲೀಸರು ತಮ್ಮ ಮೇಲೆ ಲಾಠಿ ಚಾರ್ಜ್ ಮಾಡಿ, ಕೆಳಕ್ಕೆ ತಳ್ಳಿದ್ದಾರೆ. ಪೊಲೀಸರ ಈ ನಡೆ ರಾಜಕೀಯ ಪ್ರೇರಿತ ಎಂದು ಗುಡುಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ