
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ. ಈ ಪ್ರಕರಣವನ್ನು ರಾಜ್ಯದಲ್ಲಿ ಮೂರನೇಯದ್ದು ಎಂದು ಹೇಳಲಾಗುತ್ತಿದೆ.
ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳೆಯಲು ಹೇಗೆ ಸಾಧ್ಯ? ಏನಿದು ಪ್ರಕರಣ? ಎಂಬುದನ್ನು ನೋಡುವುದಾದರೆ ಇದು ಅಪರೂಪದ ಪ್ರಕರಣ. 50 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ಇಂತದ್ದೊಂದು ವಿಚಿತ್ರ ಘಟಿಸುತ್ತದೆ.
ವೈದ್ಯಕೀಯ ಭಾಷೆಯಲ್ಲಿ ಇದನ್ನು ಫೀಟಸ್ ಇನ್ ಫೀಟು ಎಂದು ಕರೆಯುತ್ತಾರೆ. ರಾಯಚೂರಿನ ಸಿಂಧನೂರು ನಗರದ ಸಹನಾ ಆಸ್ಪತ್ರೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಎರಡು ತಿಂಗಳ ಮಗುವಿನಲ್ಲಿ ವಿಲಕ್ಷಣವಾಗಿ ಹೊಟ್ಟೆ ಉಬ್ಬಿತ್ತು. ಪದೇ ಪದೆ ವಾಂತಿ ಮಾಡುತ್ತಿತ್ತು. ಮಗುವನ್ನು ಚಿಕಿತ್ಸೆಗಾಗಿ ಇತ್ತೀಚೆಗೆ ಕರೆತರಲಾಗಿತ್ತು. ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕೆ.ಶಿವರಾಜ್ ಅವರು ಪ್ರಾಥಮಿಕ ತಪಾಸಣೆ ನಡೆಸಿದರು. ಮಗುವಿನ ತೂಕ ಹಾಗೂ ದೈಹಿಕ ಬೆಳವಣಿಗೆಯಲ್ಲೂ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅಗತ್ಯ ಪರೀಕ್ಷೆಗಳಿಗೆ ಸೂಚಿಸಿದರು. ಮಗುವಿನ ಹೊಟ್ಟೆಯೊಳಗೆ ಗಡ್ಡೆಯಂತಿರುವ ರಚನೆ ಅಲ್ಟ್ರಾ ಸೌಂಡ್ ಸ್ಕ್ಯಾನ್ ವೇಳೆ ಪತ್ತೆಯಾಯಿತು. ಬಳಿಕ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ರೇಡಿಯಾಲಜಿಸ್ಟ್ ಡಾ.ವಿವೇಕ್ ಜೀರಂಕಳಿ ಸಮ್ಮುಖದಲ್ಲಿ ನಡೆಸಿದ ಸೂಕ್ಷ್ಮ ಪರಿಶೀಲನೆಯಲ್ಲಿ, ಅದು ಸಾಮಾನ್ಯ ಗಡ್ಡೆಯಲ್ಲ; ಭ್ರೂಣವನ್ನು ಹೋಲುವ ಆಕೃತಿಯಾಗಿದೆ.
ಪರೀಕ್ಷೆಗಳ ಬಳಿಕ, ಇದು ವೈದ್ಯಕೀಯವಾಗಿ ‘ಫೀಟಸ್ ಇನ್ ಫೀಟು’ ಎಂದು ಕರೆಯಲಾಗುವ ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿ ಎಂಬುದು ದೃಢಪಟ್ಟಿದೆ. ಅವಳಿ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ರೂಪುಗೊಂಡ ಎರಡು ಭ್ರೂಣಗಳ ಪೈಕಿ ಒಂದರ ಬೆಳವಣಿಗೆ ಅಸಹಜವಾಗಿ ಸ್ಥಗಿತಗೊಂಡು, ಮತ್ತೊಂದು ಭ್ರೂಣದ ದೇಹದೊಳಗೆ ಸಿಲುಕಿಕೊಳ್ಳುವ ಸ್ಥಿತಿಯೇ ‘ಫೀಟಸ್ ಇನ್ ಫೀಟು’.
ಸದ್ಯ ಮಗುವಿಗೆ ತುರ್ತು ಚಿಕಿತ್ಸೆ ಮತ್ತು ಹೆಚ್ಚಿನ ತಪಾಸಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ಬಿಎಂಸಿಆರ್ಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿನಡೆಸಲಿರುವ ರಕ್ತ ಪರೀಕ್ಷೆ ಹಾಗೂ ಇತರ ವೈದ್ಯಕೀಯ ಮೌಲ್ಯಮಾಪನಗಳ ನಂತರ ಶಸ್ತ್ರಚಿಕಿತ್ಸೆಯ ಅಗತ್ಯ ಹಾಗೂ ಅವಧಿಯನ್ನು ನಿರ್ಧರಿಸಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



