ಪ್ರಗತಿವಾಹಿನಿ ಸುದ್ದಿ; ರಾಯಚೂರು: ಓರ್ವ ಮಹಿಳೆಯಿಂದ ಬರೋಬ್ಬರಿ 30 ಜನರಿಗೆ ಕೊರೊನಾ ಸೋಂಕು ಹರಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದ್ದು, ಇಡೀ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ಮೇ 17 ರಿಂದ ಜೂ.18 ರವರೆಗೆ ಕೊರೊನಾ ಸೋಂಕಿತರ ಪ್ರಕರಣ ಕಡಿಮೆಯಿತ್ತು. ಆದರೆ ಜೂ.18 ರ ಬಳಿಕ 41 ಜನರಿಗೆ ಸೋಂಕು ದೃಡಪಟ್ಟಿದೆ. 41 ಜನರಲ್ಲಿ ಒಬ್ಬ ಸೋಂಕಿತ ಮಹಿಳೆಯಿಂದ 30 ಜನರಿಗೆ ಸೋಂಕು ಬಂದಿರುವುದು ದೃಡಪಟ್ಟಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಟ್ಟು 559 ಸೋಂಕಿತರು ಪತ್ತೆಯಾಗಿದ್ದು ಈಗ 131 ಸಕ್ರಿಯ ಪ್ರಕರಣಗಳಿವೆ ಎನ್ನಲಾಗುತ್ತಿದೆ.
ಜೂ.20 ರಂದು ಮಸ್ಕಿ ತಾಲೂಕಿನ 35 ವರ್ಷದ ಮಹಿಳೆಗೆ ಸೋಂಕು ದೃಡ ಪಟ್ಟಿದೆ. ಈ ಮಹಿಳೆ ಕೊಪ್ಪಳ ಜಿಲ್ಲೆಯ ಮರಳಿಯಲ್ಲಿಯ ಸಂಬಂಧಿಕರ ಮದುವೆಗೆ ಹೋಗಿ ಬಂದಿದ್ದಳು ನಂತರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಅನಾರೋಗ್ಯದ ಮಧ್ಯೆಯೂ ಸಿಂಧನೂರಿನಲ್ಲಿ ಪ್ರಸಿದ್ದ ಬಟ್ಟೆ ಅಂಗಡಿಯಾದ ಅಮರದೀಪ ಕ್ಲಾತ್ ಸೆಂಟರ್ ನಲ್ಲಿ ಬಟ್ಟೆ ಖರೀದಿಸಿದ್ದಳು.
ಮಹಿಳೆಯಿಂದಾಗಿ ಬಟ್ಟೆಯಂಗಡಿಯೊಂದರಲ್ಲೇ ಒಟ್ಟು 15 ಜನರಿಗೆ ಸೋಂಕು ತಗುಲಿದೆ. ಇನ್ನೂ ಖಾಸಗಿ ಆಸ್ಪತ್ರೆಯ ಇಬ್ಬರಿಗೆ ಸೋಂಕು ದೃಡಪಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ