ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಿಮಯ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬೆಳಗಾವಿಯ ಟಾಪ್ ಇನ್ ಟೌನ್ ಹೋಟೇಲ್ ಮೇಲೆ ದಾಳಿ ನಡೆಸಿದ ಪೊಲೀಸರು, 3 ಜನರನ್ನು ಬಂಧಿಸಿ 80 ಸಾವಿರ ರೂ. ಮೌಲ್ಯದ ಉಪಕರಣ ಜಪ್ತು ಮಾಡಿದ್ದಾರೆ.
ಖಡೇಬಜಾರ ಎಸಿಪಿ ಚಂದ್ರಪ್ಪ ಎ. ನೇತೃತ್ವದಲ್ಲಿ ದಾಳಿ ನಡೆಯಿತು. ರಾತ್ರಿ ಸಮಯದಲ್ಲಿ ನಗರದ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಟಾಪ್ ಇನ್ ಟೌನ್ ಬಾರ್ & ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ನೃತ್ಯ ಮಾಡಲು ಅನುವು ಮಾಡಿಕೊಟ್ಟು ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಡೆದುಕೊಂಡಿದ್ದರು.
ಯಾವುದೇ ಇಲಾಖೆಯಿಂದ ಪರವಾನಿಗೆಯನ್ನೂ ಸಹ ಪಡೆದುಕೊಳ್ಳದೆ ಅನಧಿಕೃತವಾಗಿ ಸೌಂಡ್ ಸಿಸ್ಟಂ ಜೋರಾಗಿ ಬಳಸಿ ಶಬ್ದ ಮಾಲಿನ್ಯ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಖಡೇಬಜಾರ ಉಪವಿಭಾಗದ ಎಸಿಪಿ ಚಂದ್ರಪ್ಪ ಹಾಗೂ ಖಡೇಬಜಾರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮತ್ತು ಸಿಬ್ಬಂದಿ ದಾಳಿ ಮಾಡಿ, ಟಾಪ್ ಇನ್ ಟೌನ್ ಬಾರ್ & ರೆಸ್ಟೋರೆಂಟ್‌ನ ಮಾಲೀಕ ಮೋಹನ ರಾಘವನ್ ಹಾಗೂ ಮ್ಯಾನೇಜರಗಳಾದ ರಾಹುಲ ಸುರೇಶ ಶಹಾಪೂರಕರ್ ಮತ್ತು ಮೃತ್ಯುಂಜಯ ಕುಮಾರ ತಂದೆ ಜವಾಹರಲಾಲ ಮೂವರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಶಬ್ದ ಮಾಲಿನ್ಯ ಮಾಡುತ್ತಿದ್ದ ಸೌಂಡ್ ಸಿಸ್ಟಮ್ ಹಾಗೂ ಅದರ ಉಪಕರಣಗಳನ್ನು (೮೦ ಸಾವಿರ ರೂ. ಮೌಲ್ಯ) ಸಹ ಜಪ್ತು ಮಾಡಿಕೊಂಡು ತಪ್ಪಿತಸ್ಥರ ವಿರುದ್ಧ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ