ಮಳೆಗಾಲದ ಸ್ವರ್ಗ ತಿಲಾರಿ- ಸ್ವಪ್ನಿಲ್ ಪಾಯಿಂಟ್
ದಟ್ಟ ಮಂಜು, ಹಸಿರು ಸಿರಿ, ಬೃಹತ್ ಗುಡ್ಡಗಳ ಸಾಲು, ಮೈನವಿರೇಳಿಸುವ ಪ್ರಪಾತ, ಸಾಲು ಸಾಲು ಜಲಪಾತಗಳು… ಇಂಥ ರಮಣೀಯ ದೃಶ್ಯದ ಪರಿಸರ ತಿಲಾರಿ – ಸ್ವಪ್ನಿಲ್ ಪಾಯಿಂಟ್.
ಇದು ಅಕ್ಷರಶಃ ಮಳೆಗಾಲದ ಸ್ವರ್ಗ. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಈ ರಮಣೀಯ ಪರಿಸರ ಬೆಳಗಾವಿಯಿಂದ ಕೇವಲ 46 ಕಿಮೀ ದೂರದಲ್ಲಿದೆ. ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿರುವ ಈ ತಾಣ ಪ್ರವಾಸಿಗರ ದಟ್ಟಣೆಯಿಂದ ಮುಕ್ತವಾಗಿದೆ.
ಸ್ವಪ್ನಿಲ್ ಪಾಯಿಂಟ್ ಹಿರಿದಾದ ಹಾಗೂ ಉದ್ದನೆಯ ಕಣಿವೆಯ ತಾಣ. ಮಳೆಗಾಲದ ಬಹುತೇಕ ಅವಧಿಯಲ್ಲಿ ಮಂಜಿನಿಂದ ಆವೃತವಾಗುವ ಈ ಪರಿಸರದಲ್ಲಿ ಕಣ್ಮನ ಸೆಳೆಯುವ ನಾಲ್ಕು ಜಲಪಾತಗಳಿವೆ. ಬಿಸಿಲಿನ ವಾತಾವಣ, ಮಳೆ ಇಲ್ಲದ ಅವಧಿಯಲ್ಲಿ ಮಾತ್ರ ಕಣಿವೆ ಮಂಜಿನಿಂದ ಮುಕ್ತ. ಮಳೆ ಸುರಿಯುತ್ತಿದ್ದರೆ ಜಲಪಾತ, ಕಣಿವೆಯ ಪ್ರದೇಶವೆಲ್ಲ ದಟ್ಟ ಮಂಜಿನಲ್ಲಿ ಕಳೆದು ಹೋಗುತ್ತವೆ! ಅಷ್ಟೇ ಅಲ್ಲ, 10 ಅಡಿ ದೂರದಲ್ಲಿರುವ ವ್ಯಕ್ತಿಯೂ ಕಾಣಿಸುವುದಿಲ್ಲ.
ಮಂಜು ಮುಸುಕದೇ ಇದ್ದರೆ ಕಣ್ಣು ಹಾಯಿಸಿದಷ್ಟೂ ದೂರ ದಟ್ಟಾರಣ್ಯವೇ ಕಾಣಿಸುತ್ತದೆ. ಮಳೆ ಸುರಿಯುವ ವೇಳೆ ಮಂಜಿನಿಂದ ಮುಸುಕುವ ಪರಿಸರ ಹಾಗೂ ಮಳೆ ನಿಂತ ಮೇಲೆ ಮಂಜು ಸರಿದು ಕಣ್ಣೆದುರು ತೆರೆದುಕೊಳ್ಳುವ ನಿಸರ್ಗದ ಸೌಂದರ್ಯ ಮನ ತಟ್ಟುತ್ತದೆ. ಜೋರಾಗಿ ಬೀಸುವ ಗಾಳಿ ಹಿತ ನೀಡಿದರೆ, ಕಣಿವೆಯ ದೃಶ್ಯ ಮುದ ನೀಡುತ್ತದೆ. ಈ ಚೇತೋಹಾರಿ ಪರಿಸರದಲ್ಲಿ ಮೈಮರೆಯುವಂತಿಲ್ಲ. ಕಡಿದಾದ ಕಣಿವೆಯ ಅಂಚಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದು ಅನಿವಾರ್ಯ.
ಸ್ವಪ್ನಿಲ್ ಪಾಯಿಂಟ್ ಇರುವ ಸ್ಥಳಕ್ಕೆ ತೆರಳಲು ಆ ಸ್ಥಳದಲ್ಲಿ ನಿಗದಿತ ಶುಲ್ಕ ಪಾವತಿ ಮಾಡಬೇಕು. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ತಿಲಾರಿ ಗ್ರಾಮದ ಸಮೀಪದಲ್ಲಿರುವ ಈ ಸ್ಥಳ ಬೆಳಗಾವಿಯಿಂದ 46 ಕಿಮೀ ದೂರದಲ್ಲಿದೆ. ಬೆಳಗಾವಿ – ವೆಂಗರ್ಲಾ ರಸ್ತೆಯಲ್ಲಿರುವ ಪಾಟ್ನೆ ಪಾಟ್ ಊರಿನಿಂದ ಅಡ್ಡ ತಿರುಗಿ ತಿಲಾರಿ ನಗರ್‌ಗೆ ತೆರಳಿದರೆ ಅಲ್ಲಿಂದ 6 ಕಿಮೀ ದೂರದಲ್ಲಿದೆ ಸ್ವಪ್ನಿಲ್ ಪಾಯಿಂಟ್.
ಬೆಳಗಾವಿ- ಬೆಳಗುಂದಿ ಮಾರ್ಗದಲ್ಲೂ ತಿಲಾರಿ ನಗರ್‌ಗೆ ತೆರಳಲು ರಸ್ತೆಯಿದೆ. ತಿಲಾರಿ ನಗರ್‌ನಿಂದ ಸ್ವಪ್ನಿಲ್ ಪಾಯಿಂಟ್‌ಗೆ ತೆರಳಲು ಇರುವ ಕಿರಿದಾದ ರಸ್ತೆಯಲ್ಲಿ ಎಚ್ಚರಿಕೆಯಿಂದ ವಾಹನ ಚಾಲನೆ ಅಗತ್ಯ. ಜನ ಸಂಚಾರ, ಮನೆಗಳ ಸಂಖ್ಯೆಯೂ ವಿರಳ. ಹೀಗಾಗಿ ಆಹಾರ ಮತ್ತು ವಾಹನಕ್ಕೆ ಇಂಧನ ತುಂಬಿಕೊಂಡು ಪಯಣಿಸುವುದು ಒಳಿತು. ತಿಲಾರಿ ನಗರ್‌ನಲ್ಲಿ ರೆಸಾರ್ಟ್ ಇದ್ದು ಉತ್ತಮ ಆಹಾರ, ಸಫಾರಿ ವ್ಯವಸ್ಥೆಯಿದೆ. ಉಳಿದುಕೊಳ್ಳಲು ಕಾಟೇಜ್‌ಗಳೂ ಇವೆ.
ತಿಲಾರಿ ನಗರ್ ಸಮೀಪ ಇರುವ ಪ್ರಾಕೃತಿಕ ಗುಹೆ, ಸುಂದರ ಪರಿಸರ ನೋಡಲು ತೆರೆದ ಜೀಪಿನ ಸಫಾರಿ ವಿಶಿಷ್ಟ ಅನುಭವ ನೀಡುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ