ರಾಜ್ ಠಾಕ್ರೆ, ಮೋದಿ, ಗಡ್ಕರಿ, ಯೋಗಿ ಆದಿತ್ಯನಾಥ ಎಲ್ಲರೂ ಪ್ರಚಾರಕ್ಕೆ ಬರಬಹುದು : ಜಗದೀಶ್ ಶೆಟ್ಟರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮೈಸೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡರೆ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಆತಂಕ ಇದೆ ಎಂದು ಮಾಜಿ ಸಿಎಂ, ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಅಲ್ಲಿಯೇ ಪ್ರಚಾರ ನಡೆಸಿದ್ದಾರೆ. ಆದರೆ ಮೈಸೂರಿನಲ್ಲಿ ಕಾಂಗ್ರೇಸ್ ಸೋತರೆ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕಳೆದುಕೊಳ್ಳುವ ಆತಂಕ ಇದೆ. ಸಿದ್ದರಾಮಯ್ಯ ಇದು ನನ್ನ ಕೊನೆ ಚುನಾವಣೆ ಎಂದು ಕಳೆದ 10 ವರ್ಷಗಳಿಂದ ಹೇಳುತ್ತಿದ್ದಾರೆ. ಇದು ರಾಜಕೀಯದ ಗಿಮಿಕ್ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಸೇರಿಕೊಂಡು 28 ಕ್ಕೆ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಈ ಚುನಾವಣೆ ಮುಗಿದ ಬಳಿಕ ರಾಜ್ಯ ಸರಕಾರ ಬಿದ್ದು ಹೋಗಬಹುದು ಎಂದು ಭವಿಷ್ಯ ನುಡಿದರು.
ಮಾಜಿ ಶಾಸಕ ಮಹದೇವಪ್ಪ ಯಾದವಾಡ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾಳೆ ನಾನು ರಾಮದುರ್ಗಕ್ಕೆ ಹೊಗುತ್ತಿದ್ದೇನೆ. ನಾನು ಮಹದೇವಪ್ಪ ಅವರಿಗೆ ಫೋನ್ ಮೂಲಕ ಮಾತಾಡಿದ್ದೇನೆ. ಚಿಕ್ಕ ರೇವಣ್ಣ ಅವರಿಗೂ ಮಾತಾಡುತ್ತೇನೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳುತ್ತೇನೆ. ಮಹದೇವಪ್ಪ ಅವರು ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.
ಜಗದೀಶ್ ಶೆಟ್ಟರ್ ಪಂಚಮಸಾಲಿ ಮೀಸಲಾತಿಗೆ ವಿರೋಧ ಮಾಡಿದ್ದರು ಎನ್ನುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ರೀತಿ ನಾನು ಎಲ್ಲಿಯೂ ಮಾಡಿಲ್ಲ ಎಂದರು.
ರಾಜ್ ಠಾಕ್ರೆ, ಮೋದಿ, ಗಡ್ಕರಿ, ಯೋಗಿ ಆದಿತ್ಯನಾಥ ಎಲ್ಲರೂ ಪ್ರಚಾರಕ್ಕೆ ಬರಬಹುದು. ಎಂಇಎಸ್ ಜತೆಗೆ ಖಂಡಿತವಾಗಿಯೂ ಮಾತನಾಡುತ್ತೇನೆ, ಅವರು ನಮಗೆ ಸಹಕಾರ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಸಂಸ್ಥಾಪಕ ರಾಜ್ ಠಾಕ್ರೆ ಕರ್ನಾಟಕದ ವಿರುದ್ಧ ಮಾತಾಡುತ್ತಾರೆ ಅವರನ್ನು ನೀವು ಹೇಗೆ ಕರೆ ತಂದು ಬೆಳಗಾವಿಯಲ್ಲಿ ಪ್ರಚಾರ ಮಾಡುತ್ತಿರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ನಿರ್ಧಾರ ಮಾಡುತ್ತಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ