ಪ್ರಗತಿವಾಹಿನಿ ಸುದ್ದಿ: ಒಂದೆಡೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ಆರಂಭವಾಗಿದೆ, ಮತ್ತೊಂದೆಡೆ ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್ ನಾಯಕರು ರಾಜಭವನ ಚಲೋ ಆರಂಭಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ರಾಜಭವನ ಚಲೋ ಆರಂಭಿಸಿದ್ದಾರೆ. ವಿಪಕ್ಷ ನಯಕರ ವಿರುದ್ಧವೂ ದಾಖಲಾಗಿರುವ ಪ್ರಕರಣಗಳಿಗೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬೇಕು. ಅದನ್ನು ಬಿಟ್ಟು ಸಿಎಂ ವಿರುದ್ಧ ಮಾತ್ರ ತನಿಖೆಗೆ ಅನುಮತಿ ನೀಡಿರುವುದು ಖಂಡನೀಯ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಭವನ ಚಲೋ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಸಚಿವರು, ಸಂಸದರು, ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ. ರಾಜಭವನ ಚಲೋ ಮೂಲಕ ರಾಜ್ಯಪಾಲರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆ ವಿರುದ್ಧವೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಒತ್ತಾಯಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಚಿವರಾದ ಜಿ.ಪರಮೇಶ್ವರ್, ರಾಮಲಿಂಗಾ ರೆಡ್ಡಿ, ಡಿ.ಸುಧಾಕರ್, ಹೆಚ್.ಕೆ. ಪಾಟೀಲ್, ಬೋಸರಾಜು, ಶರಣಪ್ರಕಾಶ್ ಪಾಟೀಲ್, ಜಮೀರ್ ಅಹ್ಮದ್, ಈಶ್ವರ್ ಖಂಡ್ರೆ, ವೆಂಕಟೇಶ್, ಎಸ್.ಎಸ್ ಮಲ್ಲಿಕಾರ್ಜುನ್ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಶಿವಲಿಂಗೇಗೌಡ, ಪ್ರದೀಪ್ ಈಶ್ವರ್, ನಯನ ಮೋಟಮ್ಮ, ಕಂಪ್ಲಿ ಗಣೇಶ್, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಯು. ಬಿ ವೆಂಕಟೇಶ್, ಸುಧಾಮ್ ದಾಸ್, ಐವಾನ್ ಡಿಸೋಜ, ಸಂಸದರಾದ ಶ್ರೇಯಸ್ ಪಟೇಲ್, ಹಿರಿಯ ಮುಖಂಡರಾದ ವೀರಪ್ಪ ಮೊಯ್ಲಿ, ಎಂ.ಆರ್ ಸೀತಾರಾಮ್, ವಿ.ಎಸ್ ಉಗ್ರಪ್ಪ, ಆರ್.ವಿ ದೇಶಪಾಂಡೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ