ಪ್ರಗತಿವಾಹಿನಿ ಸುದ್ದಿ;ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ’ದರ್ಬಾರ್’ ಚಿತ್ರ ಇಂದು ವಿಶ್ಯಾದ್ಯಂತ ತೆರೆ ಕಂಡಿದ್ದು, ತಲೈವಾ ಹೊಸ ಅವತಾರಕ್ಕೆ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಈ ನಡುವೆ ಬೆಂಗಳೂರಿನ ನರ್ತಕಿ ಚಿತ್ರರಂಗದಲ್ಲಿ ರಜನಿ ’ದರ್ಬಾರ್’ ಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ರಜನಿಕಾಂತ್ ಅಭಿನಯದ ’ದರ್ಬಾರ್ ಚಿತ್ರ ಕರ್ನಾಟಕದಲ್ಲಿ ಕನ್ನಡದಲ್ಲಿ ಬಿಡುಗಡೆಯಾಗಬೇಕಿತ್ತು ಎಂದು ಆಗ್ರಹಿಸಿ ಮೆಜೆಸ್ಟಿಕ್ ಬಳಿಯ ನರ್ತಕಿ ಚಿತ್ರರಂಗಕ್ಕೆ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಲು ಯತ್ನಿಸಿವೆ.
ದರ್ಬಾರ್ ಚಿತ್ರ ಕನ್ನಡ ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರದಿಂದ ಕನ್ನಡದಲ್ಲಿ ಬಿಡುಗಡೆಯಾಗಿಲ್ಲ, ಇಂದು ಮುಂಜಾನೆ ತಮಿಳಿನ ದರ್ಬಾರ್ ಚಿತ್ರ ನರ್ತಕಿ ಚಿತ್ರಮಂದಿರದಲ್ಲಿ ತೆಲುಗಿನಲ್ಲಿ ಡಬ್ ಆಗಿ ಬಿಡುಗಡೆಗೊಂಡಿದೆ. ಈ ಹಿನ್ನಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಸಂಘಟನೆಗಳು, ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಮಾಡಬೇಕಿತ್ತು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಅಮಿನಯದ ತೆಲುಗಿನ ಸೈರಾ ನರಸಿಂಹ ರೆಡ್ಡಿ, ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರ ಕನ್ನಡದಲ್ಲಿ ಡಬ್ ಆಗಿ ಬಿಡಿಗಡೆಗೊಂಡು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವಾಗ ಸೂಪರ್ ಸ್ಟಾರ್ ರಜನಿಕಾಂತ್ ಅವರಂತಹ ಚಿತ್ರ ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆಮಾಡುತ್ತಿಲ್ಲ ಏಕೆ ಎಂದು ಪ್ರತಿಭಟನಾಕಾರರು ಪ್ರೆಶ್ನಿಸಿದ್ದಾರೆ.
ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಲು ಬಂದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಚಿತ್ರಮಂದಿರದ ಗೇಟ್ ಬಳಿಯೇ ತಡೆದು, ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ