
ಪ್ರಗತಿವಾಹಿನಿ ಸುದ್ದಿ; ಜೈಪುರ: ಮಗನ ಸಾವಿನಿಂದ ನೊಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಕುಟುಂಬದ 17 ವರ್ಷದ ಬಾಲಕ ಅಮರ್ ಸೈನಿ ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಇದರಿಂದ ಆಘಾತಕ್ಕೊಳಗಾದ ಕುಟುಂಬ ನೋವಿನಿಂದ ಹೊರಬಂದಿರಲಿಲ್ಲ. ಮಗನ ಸಾವಿನಿಂದ ನೊಂದ ತಂದೆ-ತಾಯಿ ಕಣ್ಣೀರಲ್ಲೇ ದಿನದೂಡುತ್ತಿದ್ದರು. ಇದರಿಂದ ಆತನ ಇಬ್ಬರು ಅಕ್ಕಂದಿರು ಕೂಡ ಕುಗ್ಗಿ ಹೋಗಿದ್ದರು.
ಇದೀಗ ತಂದೆ-ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಹನುಮಾನ್ ಸೈನಿ (45), ತಾರಾ ದೇವಿ (40) ಹಾಗೂ ಹೆಣ್ಣು ಮಕ್ಕಳಾದ ಪೂಜಾ ಸೈನಿ, ಚೀಕು ಎಂದು ಗುರುತಿಸಲಾಗಿದೆ.




