
ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ ರಾಜಕೀಯ ಪ್ರವೇಶದ ನಿರ್ಧಾರದಿಂದ ಹಿಂದೆ ಸರಿದಿದ್ದು, ಹೊಸ ಪಕ್ಷ ಸ್ಥಾಪನೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಟ ರಜನಿಕಾಂತ್, ಅನಾರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಸಧ್ಯಕ್ಕೆ ರಾಜಕೀಯ ಪ್ರವೇಶದ ತೀರ್ಮಾನ ಮಾಡುತ್ತಿಲ್ಲ. ಯಾವುದೇ ಹೊಸ ಪಕ್ಷ ಸ್ಥಾಪನೆಯನ್ನೂ ಮಾಡುತ್ತಿಲ್ಲ. ನಾನೀಗ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ರಾಜಕೀಯಕ್ಕೆ ಬರದಿದ್ದರೂ ಜನ ಸೇವೆ ಮುಂದುವರೆಸುತ್ತೇನೆ ಎಂದು ಬೆಂಬಲಿಗರಿಗೆ ಬರೆದ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ನಟ ರಜನಿಕಾಂತ್, ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷ ಪ್ರಕಟಿಸುವುದಾಗಿ ಹೇಳಿದ್ದರು. 2021ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ತಮಿಳುನಾಡಿನಲ್ಲಿ ಜನಪರ ಆಡತದ ಹೊಸ ಪರ್ವ ಆರಂಭಿಸುವುದಾಗಿ ಘೋಷಿಸಿದ್ದರು. ಆದರೆ ಕೆಲದಿನಗಳಿಂದ ರಜನಿಕಾಂತ್ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಅನಾರೋಗ್ಯ ಕಾರಣದಿಂದಾಗಿ ರಾಜಕೀಯ ಪ್ರವೇಶ ನಿರ್ಧಾರದಿಂದ ಇದೀಗ ಹಿಂದೆ ಸರಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ