ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬಿಜೆಪಿಯವರು ಕಳೆದ 15 ವರ್ಷದಲ್ಲಿ ನೀಡಿದ ಮಾನಸಿಕ ಹಿಂಸೆಯಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಬದುಕಿದ್ದೇ ದೊಡ್ಡದು -ಬಿಜೆಪಿಯ ಮಾಜಿ ಶಾಸಕ ಕಾಗವಾಡದ ರಾಜು ಕಾಗೆ ಅವರ ಹೇಳಿಕೆ ಇದು.
ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧರಾಗಿರುವ ಕಾಗೆ, ಬಿಜೆಪಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ನಾನು ಮಾನಸಿಕವಾಗಿ ಯಾವಾಗಲೋ ಬಿಜೆಪಿಯಿಂದ ಹೊರಬಿದ್ದಿದ್ದೇನೆ. ಬಹಳಷ್ಟು ಅಪಮಾನಗಳನ್ನು ಸಹಿಸಿಕೊಂಡು ಕೇವಲ ದೈಹಿಕವಾಗಿ ಇಲ್ಲಿದ್ದೆ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಯಡಿಯೂರಪ್ಪ ಹುಬ್ಬಳ್ಳಿಯ ಸಭೆಯಲ್ಲಿ ಏನೇನು ಹೇಳಿದ್ದಾರೆ ಎನ್ನುವುದು ಗೊತ್ತಿದೆ. 33 ಸಾವಿರ ಮತಗಳಿಂದ ಬಿದ್ದಿರುವ ರಾಜುಕಾಗೆಗೆ ಟಿಕೆಟ್ ನೀಡಬೇಕಾ ಎಂದು ಕೇಳಿದ್ದಾರೆ. ಅವರ ಪರವಾಗಿ ಮಾತನಾಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕಿಂತ ಅವಮಾನ ಬೇಕಾ? ನಾನು ಅಲ್ಲಿ ಏಕೆ ಇರಬೇಕು? ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ರಾಜುಕಾಗೆ ಹೇಳಿದ್ದಾರೆ.
ನನಗೆ ಅಧಿಕಾರಕ್ಕಿಂತ ಮಾನ ಮರ್ಯಾದೆ ಮುಖ್ಯ. ಅದನ್ನೆಲ್ಲ ಸಹಿಸಿಕೊಂಡು ನಾನು ಬಿಜೆಪಿಯಲ್ಲಿರಬೇಕಾ? ಸಣ್ಣ ಮಕ್ಕಳಿಗೆ ಕೊಟ್ಟಂತೆ ಕಾಡಾ ಅಧ್ಯಕ್ಷ ಸ್ಥಾನ ನೀಡಿದರೆ ಸ್ವೀಕರಿಸಬೇಕಾ? ರಾಜಕಾರಣಿಯಾಗಿ 3 ವರ್ಷ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವೇ? ಮನೆಯಲ್ಲಿ ಕುಳಿತರೆ ಕಾರ್ಯಕರ್ತರು ಅತಂತ್ರರಾಗುತ್ತಾರೆ. ನಾನು ಈಗಾಗಲೆ ಕಾಂಗ್ರೆಸ್ ನ ಎಲ್ಲ ನಾಯಕರನ್ನೂ ಭೇಟಿಯಾಗಿದ್ದನೆ ಎಂದು ಅವರು ಹೇಳಿದರು.
ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿರುವ ರಾಜು ಕಾಗೆ 13ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಲಿದ್ದಾರೆ. 18ರಂದು ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸುತ್ತೇನೆ ಎಂದು ರಾಜುಕಾಗೆ ತಿಳಿಸಿದರು.
ಒಂದೊಮ್ಮೆ ಕಾಗವಾಡ ಕ್ಷೇತ್ರದ ಚುನಾವಣೆ ರದ್ದಾದರೆ ರಾಜು ಕಾಗೆ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ