ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಜ್ಯಸಭೆಯಲ್ಲಿ ಕೃಷಿ ವಿಧೇಯಕ ಮಂಡನೆ ವೇಳೆ ಗದ್ದಲ ಮಾಡಿ, ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ಎಂಟು ವಿಪಕ್ಷ ಸದಸ್ಯರನ್ನು ಅಮಾನತುಗೊಳಿಸಿ ಸಭಾಪತಿ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದಾರೆ.
ನಿನ್ನೆ ಕೃಷಿ ವಿಧೇಯಕ ಅಂಗೀಕಾರದ ವೇಳೆ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆ ಹಾಗೂ ಉಪ ಸಭಾಪತಿ ಅವರನ್ನು ಅನುಚಿತವಾಗಿ ನಡೆಸಿಕೊಂಡ ಆರೋಪ ಮತ್ತು ಅಶಿಸ್ತಿನ ವರ್ತನೆ ಮೇರೆಗೆ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಕೃಷಿ ವಿಧೇಕಯ ಮಂಡನೆ ವೇಳೆ ಮಸೂದೆ ಧ್ವನಿಮತಕ್ಕೆ ಹಾಕುತ್ತಿದ್ದಂತೆಯೇ ವಿಪಕ್ಷ ಸದಸ್ಯರು ಗದ್ದಲ ಆರಂಭಿಸಿದ್ದರು. ಈ ವೇಳೆ ಟಿಎಂಸಿ ಸದಸ್ಯ ಡೆರೆಕ್ ಒ ಬ್ರಿಯಾನ್, ಉಪಸಭಾಪತಿ ಬಳಿ ತೆರಳಿ ರೂಲ್ ಬುಕ್ ಕಿತ್ತುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಸೈಯದ್ ನಾಸೀರ್ ಹುಸೇನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್ ಮತ್ತು ಎಲಮರನ್ ಕರೀಮ್ ಅವರು ಕೂಡ ಮಸೂದೆ ಮಂಡನೆ ವಿರೋಧ ವ್ಯಕ್ತಪಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ