Kannada NewsKarnataka NewsLatest

 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ ಎಲ್ ಪಾಟೀಲ ಅವರಿಗೆ ಹುಕ್ಕೇರಿ ಹಿರೇಮಠದ ಸನ್ಮಾನ 

ಪ್ರಗತಿವಾಹಿನಿ ಸುದ್ದಿ,  ಹುಕ್ಕೇರಿ  –
ಬಡವರ್ಗದ ಜನರನ್ನು ಮತ್ತು ಸಮಾಜದಲ್ಲಿ ನೊಂದ ಜನರಿಗೆ ಆಶ್ರಯ ತಾಣವಾಗಿರುವ ಮಲಾಬಾದ ವಿಮೋಚನ ಸಂಸ್ಥೆ ಮತ್ತು ಅದರ ರೂವಾರಿ ಬಿ ಎಲ್ ಪಾಟೀಲರವರ ಸೇವೆ ಅಸಾಮಾನ್ಯವಾದುದು ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
           ಸ್ಥಳೀಯ ಗುರುಶಾಂತೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಸರಳ ವೇದಿಕೆಯಲ್ಲಿ  ಬಿ ಎಲ್ ಪಾಟೀಲ ಅವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸಂದ ಪ್ರಯುಕ್ತ ಶ್ರೀಮಠ ಗೌರವ ಸನ್ಮಾನ ನೀಡಿದರು.
ದೇವದಾಸಿ ಪದ್ಧತಿ ಮುಂದುವರಿಯಲು ಕುಟುಂಬದ ಆರ್ಥಿಕ ಪರಿಸ್ಥಿತಿ, ಧಾರ್ಮಿಕತೆ ಮತ್ತು ಮೂಢನಂಬಿಕೆಗಳು ಎಷ್ಟು ಕಾರಣವೋ, ಅಷ್ಟೇ ಮುಖ್ಯವಾದುದು, ಅವರು ವಾಸಿಸುವ ಪರಿಸರ. ಸುತ್ತಮುತ್ತಲಿನ ಜನ ಅದನ್ನೇ ಮಾಡುತ್ತಿರುವಾಗ ಒಬ್ಬನೇ ಒಬ್ಬನು ಅದಕ್ಕೆ ತದ್ವಿರುದ್ಧವಾಗಿ ವರ್ತಿಸಲಾರ. ಆದ್ದರಿಂದ ಆ ಸಂದರ್ಭದಲ್ಲಿ ಬಿ.ಎಲ್. ಪಾಟೀಲರು ಪ್ರಾರಂಭಿಸಿದ್ದು ವಸತಿ ಶಾಲೆಯನ್ನು. ಯಾವ ಪರಿಸರವು ಮಕ್ಕಳನ್ನು ತಪ್ಪು ದಾರಿಗೆ ಎಳೆಯುತ್ತಿತ್ತೋ, ಯಾವ ಪರಿಸರ ಮಕ್ಕಳಿಗೆ ರಕ್ಷಣೆ, ಶಿಕ್ಷಣ ಕೊಡುತ್ತಿರಲಿಲ್ಲವೋ ಅಂಥ ಜಾಗದಿಂದ ಮುಂದೆ ದೇವದಾಸಿ ಪದ್ಧತಿಗೆ ತೊಡಗುವ ಹೆಣ್ಣು ಮಕ್ಕಳನ್ನು ಮತ್ತು ಅದಕ್ಕೆ ಪ್ರೇರೇಪಣೆ ನೀಡುವ ಗಂಡು ಮಕ್ಕಳನ್ನು ಹೊರತಂದು ಕರ್ನಾಟಕ ರಾಜ್ಯದ ಗಡಿಗ್ರಾಮ ಮಲಾಬಾದ ಎಂಬ ಊರಿನ ಪ್ರಶಾಂತ ವಾತಾವರಣದಲ್ಲಿ ವಸತಿ ಶಾಲೆ ಪ್ರಾರಂಭಿಸಿದರು. ಅಲ್ಪ ಮಕ್ಕಳಿಂದ ಪ್ರಾರಂಭವಾದ ಶಾಲೆಯು ಇದೀಗ ಸಾವಿರ ತಲುಪಿದೆ.
ಪಾಟೀಲರವರ ದಕ್ಷ ಮತ್ತು ಪ್ರಾಮಾಣಿಕ ಹೋರಾಟ,  ಜನರಸಹಕಾರದಿಂದ ಬೆಳೆದದ್ದು ವಿಶೇಷ ಮತ್ತು ಒಂದೆ ತಿಂಗಳಲ್ಲಿ ರಾಜ್ಯದ ಅತ್ಯುತ್ತಮ ಎರಡು ಪುರಸ್ಕಾರಕ್ಕೆ ಭಾಜನರಾಗಿರುವುದು ಅಭಿನಂದನೀಯ ಎಂದರು.
        ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ ಎಲ್ ಪಾಟೀಲರು ನನ್ನ ಪರಿಶ್ರಮಕ್ಕೆ ಸಂದ ಸನ್ಮಾನವಿದು. ಹುಕ್ಕೇರಿ ಹಿರೇಮಠ ಈ ಭಾಗದ ಶ್ರದ್ಧಾ ಕೇಂದ್ರ. ಅನ್ನ, ಅರಿವು, ಆಶ್ರಯದ ಮೂಲಕ ಗಡಿಭಾಗದಲ್ಲಿ ಕನ್ನಡದ ಕಾರ್ಯಮಾಡುತ್ತಿರುವುದು ಅಭಿಮಾನವನ್ನು ಪಡುವ ವಿಷಯವೆಂದರು.
        ಈ ಸಂದರ್ಭದಲ್ಲಿ ಗುರುಕುಲದ ಸಾಧಕರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button