ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಯುವ ಸಮೋಹ ಮಧ್ಯರಾತ್ರಿವರೆಗೂ ಸಂಭ್ರಮಾಚರಣೆ ನಡೆಸಿದ್ದು, ಕುಣಿದು ಕುಪ್ಪಳ್ಳಿಸಿದ್ದಾರೆ. ಈ ಮಧ್ಯೆ ಸಣ್ಣ ಪುಟ್ಟ ಅಹಿತಿಕರ ಘಟನೆಗಳು ನಡೆದಿದೆ.
ಅಕ್ಟೋಬರ್ 31ರ ಸಂಜೆಯಿಂದಲೇ ಆರಂಭವಾಗಿದ್ದ ರಾಜ್ಯೋತ್ಸವದ ಝಲಕ್ ನವೆಂಬರ್ 2ರ ರಾತ್ರಿವರೆಗೂ ನಡೆದಿದೆ. ಈಬಾರಿ ಒಟ್ಟು 24 ಗಂಟೆಗೂ ಹೆಚ್ಚು ಕಾಲ ಭರ್ಜರಿ ಉತ್ಸವ ನಡೆದಿದೆ.
ಇನ್ನೂ ಬೆಳಗಾವಿಯ ವೈಭವದ ರಾಜ್ಯೋತ್ಸವದ ದೃಶ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಜನರು ಕುಣಿದು ಕುಪ್ಪಳಿಸುತ್ತಿರುವ ದೃಶ್ಯ ದ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಲ್ಲಲ್ಲೂ ಕನ್ನಡ ಧ್ವಜಗಳ ರಾರಾಜಿಸುತ್ತಿದ್ದವು. ಯುವ ಸಮೂಹದ ಕನ್ನಡ ಉತ್ಸಾಹ ಮುಗಿಲು ಮುಟ್ಟಿದ್ದವು.
ಮೆರವಣಿಗೆಯಲ್ಲಿ ಯುವಕನ ಮೇಲೆ ಮಾರಣಾಂತಕ ಹಲ್ಲೆ:
ಬೆಳಗಾವಿಯ ಸೋಶಿಯಲ್ ಕ್ಲಬ್ ಎದುರು ನಿನ್ನೆ ರಾತ್ರಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಖಾನಾಪುರ ರಸ್ತೆಯ ಕಮಲ ನಗರದ ಮಲ್ಲೇಶ ಪೂಜಾರಿ (29) ಹಲ್ಲೆಗೊಳಗಾದವ. ರೂಪಕ ವಾಹನದಲ್ಲಿ ಕುಳಿತಿದ್ದ ಮಲ್ಲೇಶ ಪೂಜಾರಿ ಮೇಲೆ ಏಕಾಏಕಿ ದಾಳಿ ನಡೆದಿದೆ. ಮಲ್ಲೇಶ ಪೂಜಾರಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಲ್ಲೇಶ ಪೂಜಾರಿ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪುಂಡರಿಗೆ ಲಾಠಿ ರುಚಿ ತೊರಿಸಿದ ಖಾಕಿ:
ಕುಣಿಯುವ ವಿಚಾರಕ್ಕೆ ಎರಡು ಗುಂಪಿನನಡುವೆ ಹೊಡೆದಾಟವಾಗಿದೆ. ಹೊಡೆದಾಟ ಪ್ರಾರಂಭವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಲಾಠಿ ರುಚಿ ತೋರಿಸಿದರು. ಆಗ ಪುಂಡರ ಗುಂಪು ಸ್ಥಳದಿಂದ ಕಾಲ್ಕಿತ್ತಿದೆ. ಈ ಬಾರಿಯ ರಾಜ್ಯೋತ್ಸವ ಆಚರಣೆಗೆ ನಗರ ಪೊಲೀಸ್ ವ್ಯವಸ್ಥೆ ಅದ್ಭುತ ಕೆಲಸ ಮಾಡಿದೆ. ಬಿಗಿ ಭದ್ರತೆ ಕೈಗೊಂಡು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದು ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ