Kannada NewsKarnataka NewsLatest

*ರಾಮ, ಧರ್ಮದ ಹೆಸರಲ್ಲಿ ಬಿಜೆಪಿ ರಾಜಕೀಯ: ಸಚಿವ ತಂಗಡಗಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ, ಉಡುಪಿ, ಜ.23:

ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ. ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರು. ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ‌ ಶಿವರಾಜ್ ತಂಗಡಗಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಡುಪಿ ಜಿಲ್ಲೆಗೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು,
ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ. ನಾವು ಪ್ರತಿದಿನ ಎದ್ದು ದೇವರ ಮನೆಯಲ್ಲಿ ನಮಸ್ಕಾರ ಮಾಡಿಯೇ ಮನೆಯಿಂದ ಹೊರಡುವುದು. ನಾನು ಕಿಷ್ಕಿಂದೆ ಜಿಲ್ಲೆಯಲ್ಲಿರುವವನು. ಪ್ರತಿ ವರ್ಷ ಆಂಜನೇಯ ಮಾಲೆ ಹಾಕುತ್ತೇನೆ. ಭಕ್ತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಮಾಲೆ ಹಾಕುತ್ತೇನೆ. ಈ ರೀತಿ ದೇವರ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಛೇಡಿಸಿದರು.

ಚುನಾವಣೆ ಬಂದಾಗ ಬಿಜೆಪಿಗೆ ಧರ್ಮ, ಮಸೀದಿ, ಪಾಕಿಸ್ತಾನ ನೆನಪಾಗುತ್ತದೆ. ಬಿಜೆಪಿಗೆ ಅಭಿವೃದ್ಧಿ ಮತ್ತು ಬಡವರ ಬಗ್ಗೆ ಚಿಂತನೆ ಬೇಕಾಗಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದರು.

ಮತ್ತೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಬಿಜೆಪಿ ದೇಶ ಆಳಿದೆ. ಕರ್ನಾಟಕದಲ್ಲಿ ಆದ ಪರಿಸ್ಥಿತಿ ದೇಶದಲ್ಲೂ ಬಿಜೆಪಿಗೆ ಬರಲಿದೆ ಎಂದು ಹೇಳಿದರು.‌

ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರದ ಬಗ್ಗೆ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಧಿಕಾರ ನೀಡುವಾಗ ಸಮನಾಗಿ ಜಿಲ್ಲಾವಾರು ಹಂಚಿಕೆ ಮಾಡಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಧೈರ್ಯ ಇಲ್ಲದ ಸಂಸದರು
ಕನ್ನಡಕ್ಕೆ ಶಾಸ್ತ್ರೀಯ ಮಾನ್ಯತೆ ಸಿಕ್ಕರೂ ಅನುದಾನ ಸಿಗುತ್ತಿಲ್ಲ ಎಂಬ ಪ್ರಶ್ನೆಗೆ, ಈ ತಿಂಗಳ ಅಂತ್ಯಕ್ಕೆ ನಾನು ದೆಹಲಿಗೆ ಭೇಟಿ ನೀಡಲಿದ್ದು, ಕೇಂದ್ರ ಸಂಸ್ಕೃತಿ ಖಾತೆ ಸಚಿವರನ್ನು ಭೇಟಿ ಮಾಡಿ‌ ಈ ಬಗ್ಗೆ ಮನವಿ ಮಾಡುತ್ತೇನೆ ಎಂದರು.

ತಮಿಳುನಾಡಿನಲ್ಲಿ ಅಲ್ಲಿನ‌ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿ ಕೇಂದ್ರ ಸರ್ಕಾರ ವಿಶೇಷ‌ ಅನುದಾನ ನೀಡುತ್ತಿದೆ. ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ಅನ್ಯಾಯವೆಸಗುತ್ತಿದೆ ಎಂದು ದೂರಿದರು.

ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿಯ ಒಬ್ಬ ಸಂಸದರು ಕೂಡ ಧನಿ ಎತ್ತುವುದಿಲ್ಲ. ಪ್ರಧಾನಿ ಎದುರು ನಿಂತು ಮಾತನಾಡುವ ಧೈರ್ಯ ಕೂಡ 25 ಸಂಸದರಿಗೆ ಇಲ್ಲ. ಪ್ರಧಾನಿ ಕಂಡರೆ ರಾಜ್ಯದ ಸಂಸದರಿಗೆ ಭಯ ಎಂದು ಕುಟುಕಿದರು.

Related Articles

Back to top button