*ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಮುಹೂರ್ತ ನಿಗದಿ ಮಾಡಿದ್ದು ಬೆಳಗಾವಿಯವರು?*
ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯಲ್ಲಿ ಜನವರಿ 22ರಂದು ಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಐತಿಹಾಸಿಕ ಪುಣ್ಯ ಕಾಲವನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತ ಕೋಟ್ಯಂತರ ಭಕ್ತರು ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಮುಹೂರ್ತ ನೀಡಿದ್ದು ಕರ್ನಾಟಕದವರು. ಅದರಲ್ಲಿಯೂ ಬೆಳಗಾವಿಯವರು ಎನ್ನಲಾಗುತ್ತಿದೆ.
ಬೆಳಗಾವಿಯ ನವ ಬೃಂದಾವನದ ವಿಜಯೇಂದ್ರ ಶರ್ಮಾ ಅಯೋಧ್ಯೆ ರಾಮ ಮಂದಿರದ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಮುಹೂರ್ತ ನಿಗದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವಿದ್ಯಾವಿಹಾರ ವಿದ್ಯಾಲಯದ ಕುಲಪತಿಗಳೂ ಆಗಿರುವ ವಿಜಯೇಂದ್ರ ಶರ್ಮಾ, 2023ರ ಏ.15ರಂದು ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆಗೆ ಮುಹೂರ್ತ ನೀಡಿದ್ದರು. ಅಭಿಜಿತ್ ಮುಹೂರ್ತ, ಮೇಷ ಲಗ್ನದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸಲು ಹೇಳಿದ್ದರಂತೆ. ವಿಜಯೇಂದ್ರ ಶರ್ಮಾ ನೀಡಿದ್ದ ಈ ಮುಹುರ್ತದಲ್ಲೇ ಈಗ ಮೂರ್ತಿ ಪ್ರತಿಷ್ಥಾಪನೆಯಾಗುತ್ತಿದೆ ಎಂಬುದು ವಿಶೇಷ.
2023ರ ಏ.13ರಂದು ರಾಮ ಜನ್ಮಭೂಮಿ ಟ್ರಸ್ಟ್ ಕೋಶಾದ್ಯಕ್ಷ ಸ್ವಾಮಿ ಗೋವಿಂದ ದೇವಗಿರಿ ಎಂಬುವವರು ಬಾಲರಾಮನ ಪ್ರತಿಷ್ಠಾಪನೆಗೆ ದಿನಾಂಕ, ಮುಹೂರ್ತ ನೀಡುವಂತೆ ವಿಜಯೇಂದ್ರ ಶರ್ಮ ಬಳಿ ಕೇಳಿದ್ದರಂತೆ. ಎರಡು ದಿನಗಳಲ್ಲಿ ದಿನಾಂಕ, ಮುಹೂರ್ತ ಗುರುತಿಸಿ ಪತ್ರದ ಮೂಲಕ ರವಾನಿಸಿದ್ದರಂತೆ. ರಾಮ ಮಂದಿರದ ಟ್ರಸ್ಟಿಗಳು, ಪಂಡಿತರು ಸೇರಿಕೊಂಡು ಇದೀಗ ಅದೇ ಮುಹೂರ್ತವನ್ನು ನಿಗದಿ ಮಾಡಿದ್ದು, ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ