ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕೇವಲ ಎರಡು ದಿನ ಮಾತ್ರ ಬಾಕಿಯಿದೆ. ಜನವರಿ 22ರಂದು ಐತಿಹಾಸಿಕ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಈಗಾಗಲೇ 51 ಇಂಚಿನ 5 ವರ್ಷದ ಬಾಲರಾಮನ ಮೂರ್ತಿ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ. ರಾಮಲಲ್ಲಾ ಮೂರ್ತಿ ಹೇಗಿರಬಹುದು ಎಂದು ಕೋಟ್ಯಂತರ ಭಾರತೀಯರು ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿದೆ. ರಾಮಲಲ್ಲಾ ಮೂರ್ತಿ ವಿಗ್ರಹದ ಮೊದಲ ಫೋಟೊ ಬಿಡುಗಡೆಯಾಗಿದೆ.
ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿ ವಿರಾಜಮಾನವಾಗಿದ್ದು ದೈವಿ ಕಳೆಹೊಂದಿರುವ ಬಾಲರಾಮನ ಮೂರ್ತಿ ಅತ್ಯದ್ಭುತವಾಗಿದೆ. ಕೊರಳಲ್ಲಿ ಆಭರಣ, ಕೈಯಲ್ಲಿ ನಾಗಮುದ್ರೆ, ಮೊಗದಲ್ಲಿ ದೈವಿ ಕಳೆ, ಧನುರ್ದಾರಿಯಾಗಿ ಕಮಲದ ಮೇಲೆ ನಿಂತಿರುವ ಬಾಲರಾಮ… ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆ, ಹನುಮ, ಆದಿ ಶಕ್ತಿ ದೇವಿ, ಶಂಕ, ಚಕ್ರ, ಓಂಕಾರ ,ಸ್ವಸ್ತಿಕ್ ಸೇರಿದಂತೆ ಪೂರ್ಣ ಪ್ರಮಾಣದ ಶ್ರೀರಾಮನ ವಿಗ್ರಹ ಎಲ್ಲರ ಕಣ್ಮನ ಸೆಳೆಯುವಂತಿದೆ.
ಜ.22ರಂದು ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಅಂದು ಮೂರ್ತಿಗೆ ದೃಷ್ಟಿ ನೀಡುವ ಕೆಲಸವೂ ಇದ್ದು, ಶಿಲ್ಪಿ ಅಂತಿಮವಾಗಿ ಬಾಲರಾಮ ಮೂರ್ತಿಗೆ ದೃಷ್ಟಿ ಕೆತ್ತನೆ ಮಾಡಲಿದ್ದಾರೆ. ಒಟ್ಟಾರೆ ಅಯೋಧ್ಯೆಯಾದ್ಯಂತ ರಾಮನಾಮ ತುಂಬಿದ್ದು, ಎಲ್ಲೆಲ್ಲೂ ಸಡಗರ-ಸಂಭ್ರಮ… ಭಕ್ತಿ ಭಾವದ ಜೈ ಶ್ರೀರಾಮ್ ಘೋಷಣೆ… ಭಗವಂತನ ಆರಾಧನೆ, ಭಕ್ತಿಯ ಪರಾಕಾಷ್ಠೆ ಮನೆಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ