ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ಭೀಕರ ದಾಳಿಗೆ ಬಲಿಯಾಗಿರುವ ಕನ್ನಡಿಗ ವಿದ್ಯಾರ್ಥಿ ನವೀನ್ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಉಕ್ರೇನ್ ನಲ್ಲಿ ರಷ್ಯಾ ಯುದ್ಧ ಸಾರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮೊದಲೇ ಗುಪ್ತಚರ ಇಲಾಖೆಯಿಂದ ಮಾಹಿತಿ ಇರಲಿಲ್ಲವೇ? ಕಳೆದ 7 ದಿನಗಳಿಂದ ಯುದ್ಧ ಆರಂಭವಾಗಿದೆ. ಭಾರತೀಯ ವಿದ್ಯಾರ್ಥಿಗಳು ಊಟ, ಆಹಾರ, ನೀರು ಇಲ್ಲದೇ ಬಂಕರ್ ನಲ್ಲಿ ಆಶ್ರಯ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಂಕಷ್ಟ ಕೇಂದ್ರ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲವೇ? ಏರ್ ಲಿಫ್ಟ್ ತ್ವರಿತಗೊಳಿಸುವುದು ಬಿಟ್ಟು ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಕೇಂದ್ರ ನಾಯಕರು ತೊಡಗಿರುವುದು ಬೇಜವಾಬ್ದಾರಿ ನಡೆ ಎಂದು ಕಿಡಿಕಾರಿದರು.
ಕನ್ನಡಿಗ ವಿದ್ಯಾರ್ಥಿ ನವೀನ್ ರಷ್ಯಾ ದಾಳಿಗೆ ಬಲಿಯಾಗಿದ್ದಾನೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಇದುವರೆಗೂ ಕೇವಲ 500 ವಿದ್ಯಾರ್ಥಿಗಳನ್ನು ಮಾತ್ರ ಕರೆತರಲಾಗಿದೆ. 4000 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿಯಿಲ್ಲ. ಅದರಲ್ಲೂ ಕರ್ನಾಟಕದ ವಿದ್ಯಾರ್ಥಿಗಳನ್ನು ಕರೆತರುವ ಬಗ್ಗೆ ಕೇಂದ್ರಕ್ಕೆ ಆಸಕ್ತಿಯೂ ಇದ್ದಂತಿಲ್ಲ. ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಗುಡುಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಪ್ರಿಯರು. ಇನ್ನಾದರೂ ಪ್ರಚಾರ ಬಿಟ್ಟು ಭಾರತೀಯರ ರಕ್ಷಣಾ ಕಾರ್ಯಕ್ಕೆ ಮುಂದಾಗಿ. ಭಾರತೀಯರು ಉಕ್ರೇನ್ ನಲ್ಲಿ ಸಂಕಷ್ಟಕ್ಕೀಡಾಗಿದ್ದರೂ ಅರ್ಥವಾಗದ ಸ್ಥಿತಿಯಲ್ಲಿದ್ದಾರೆ. ಇಂದು ರಾಜ್ಯದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಈಗಲಾದರೂ ಎಚ್ಚೆತ್ತು ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣ ಏರ್ ಲಿಫ್ಟ್ ಮಾಡಿ ಎಂದು ಹೇಳಿದ್ದಾರೆ.
ರಷ್ಯಾ ದಾಳಿಯಲ್ಲಿ ಮಡಿದ ಕನ್ನಡಿಗ ನವೀನ್ ಮೃತದೇಹ ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ