
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾಜಿ ಸಚಿವ ರಮೇಶ ಜಾರಕಿಹೊಳಿ ಮುಂಬೈನಿಂದ್ ವಾಪಸ್ಸಾದ ಬಳಿಕ ಇಂದು ಗೋಕಾಕ್ ನಿಂದ ಬೆಂಗಳೂರು ಕಡೆಗೆ ಹೊರಟಿದ್ದಾರೆ.
ಬೆಂಗಳೂರಿಗೆ ಹೊರಡುವ ಮುನ್ನ ಮಾಧ್ಯಮಗಳ ಯಾವುದೇ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಸಚಿವ ಸಂಪುಟ ಸೇರಬೇಕೆನ್ನುವ ಕಾರ್ಯತಂತ್ರವಿಟ್ಟುಕೊಂಡು ಪ್ರಯಾಣ ಬೆಳೆಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಸಚಿವಸ್ಥಾನ ಕುರಿತು ಒತ್ತಡ ಹೇರುವ ಯೋಜನೆ ಹಾಕಿಕೊಂಡಿದ್ದ ರಮೇಶ ಜಾರಕಿಹೊಳಿ ಮುಂಬೈನಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಜೊತೆ ಮಾತುಕತೆ ನಡೆಸಿದ ನಂತರ ನಿರ್ಧಾರ ಬದಲಿಸಿದ್ದಾರೆ.
ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿ 4 ತಿಂಗಳಾಗಿದೆ. ಕೆಲವೇ ದಿನದಲ್ಲಿ ಆರೋಪಮುಕ್ತರಾಗಿ ಮತ್ತೆ ಸಂಪುಟ ಸೇರಬಹುದು ಅಂದುಕೊಂಡಿದ್ದ ಅವರ ಯೋಚನೆ ಮತ್ತು ಅನೇಕ ಹಿತೈಷಿಗಳ ಸಲಹೆಗಳು ಕೈಗೂಡಲಿಲ್ಲ. ಅವರ ಬದಲಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವಸ್ಥಾನ ಸಿಗಬಹುದೆನ್ನುವ ಯೋಚನೆಯೂ ಕಾರ್ಯಸಾಧುವಾಗಿಲ್ಲ.
ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಶೀಘ್ರ ಬಿ ರಿಪೋರ್ಟ್ ಸಲ್ಲಿಸಬಹುದೆನ್ನುವ ನಿರೀಕ್ಷೆ ಹುಸಿಯಾಗಿದೆ. ನಮ್ಮದೆ ಸರಕಾರವಿದ್ದರೂ ನನಗೆ ಸಹಾಯ ಮಾಡುತ್ತಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ಎಂದು ಬೇಸರಗೊಂಡಿರುವ ಅವರು ತಮ್ಮ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುವ ಮೂಲಕ ಒತ್ತಡ ಹೇರಬೇಕೆಂದು ಯೋಚಿಸಿದ್ದರು.
ಆದರೆ ಅವರೊಂದಿಗೇ ಬಿಜೆಪಿ ಸೇರಿ ಬಿಜೆಪಿ ಸರಕಾರ ರಚನೆಗೆ ಕಾರಣರಾಗಿದ್ದವರೂ, ಈ ಸಂದರ್ಭದಲ್ಲಿ ರಾಜಿನಾಮೆ ಬೇಡ. ರಾಜ್ಯದಲ್ಲಿ ಕೊರೋನಾ ಸಂಕಷ್ಟವಿರುವಾಗ ರಾಜಕೀಯ ಮಾಡಿದರೆ ಬೇರೆ ಅರ್ಥ ಬರುತ್ತದೆ. ಹಾಗಾಗಿ ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸೋಣ ಎನ್ನುವ ಸಲಹೆ ನೀಡಿದ್ದಾರೆ.
ಹಾಗಾಗಿ ಮುಂಬೈನಿಂದ ವಾಪಸ್ಸಾಗಿದ್ದಾರೆ. ಸಧ್ಯಕ್ಕೆ ರಾಜಿನಾಮೆ ಯೋಚನೆಯಿಂದ ಹಿಂದೆ ಸರಿದಿದ್ದಾರೆ. ತಮ್ಮ ಆಕ್ರೋಶ, ಅಸಮಧಾನದ ಸಂದೇಶವನ್ನು ಬಿಜೆಪಿಗೆ ರವಾನಿಸಿದ್ದಾರೆ. ಪ್ರಕರಣ ಮುಂಗಿಯುವವರೆಗೆ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವದು ಕಷ್ಟ ಎಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರು ಸಧ್ಯಕ್ಕೆ ರಮೇಶ ಜಾರಕಿಹೊಳಿ ಅವರನ್ನು ಸಮಾಧಾನಪಡಿಸುವ ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಬೇಕೆನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ ಅವರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮಿತ್ರ ಮಂಡಳಿಯ ಸದಸ್ಯರೊಂದಿಗೆ ಅವರು ಚರ್ಚೆ ನಡೆಸುವ ಸಾಧ್ಯತೆ ಇದೆ.
ಅವಸರ ಮಾಡಬೇಡಿ. ತಾಳ್ಮೆಯಿಂದಿದ್ದು ಪ್ರಕರಣ ಮುಗಿಸೋಣ. ನಂತರದಲ್ಲಿ ನಿಮಗೆ ಸಚಿವಸ್ಥಾನವನ್ನು ಮರಳಿ ಕೊಡಲಾಗುವುದು. ಈಗ ಆತುರ ಮಾಡಿದರೆ ಬೇರೇ ರೀತಿಯ ಸಂದೇಶ ಹೊಗುತ್ತದೆ. ಪ್ರಕರಣ ಮತ್ತಷ್ಟು ಗೋಜಲಾದೀತು ಎಂದು ಸಮಾಧಾನ ಹೇಳಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಆದಷ್ಟು ಬೇಗ ಪ್ರಕರಣ ಮುಗಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ತಮಗೆ ಕ್ಲೀನ್ ಚಿಟ್ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ತಾವು ಸಚಿವರಾಗಿ, ಜಲಸಂಪನ್ಮೂಲ ಇಲಾಖೆಗೆ ಮರಳಿ ಬರುವವರೆಗೆ ದೊಡ್ಡ ಬಜೆಟ್ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎನ್ನುವ ಷರತ್ತುಗಳನ್ನು ರಮೇಶ ಜಾರಕಿಹೊಳಿ ಮುಂದಿಡುವ ಸಾಧ್ಯತೆ ಇದೆ.
ಬುಧವಾರ ರಮೇಶ ಜಾರಕಿಹೊಳಿ ರಾಜಿನಾಮೆ?; 20 ಸಾವಿರ ಕೋಟಿ ರೂ. ವಿವಾದದ ಸುತ್ತ….
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ