ಮತ್ತೆ ಅಧಿಕಾರಕ್ಕೇರುವ ಸಂದರ್ಭ ಬಂದರೆ ಮುತ್ಸದ್ದಿತನದಿಂದ ಹೆಜ್ಜೆ ಇಡುವಂತಾಗಲಿ. ಪಕ್ಷ ಯಾವುದಿದ್ದರೂ, ಸಹೋದರರಾದ ಸತೀಶ್ ಮತ್ತು ಬಾಲಚಂದ್ರ ಅವರ ಸಲಹೆ, ಮಾರ್ಗದರ್ಶನ ಪಡೆದಲ್ಲಿ ರಮೇಶ್ ದಾರಿ ತಪ್ಪಲು ಅವಕಾಶ ಕಡಿಮೆ.
ಎಂ.ಕೆ.ಹೆಗಡೆ, ಬೆಳಗಾವಿ – ರಾಜ್ಯದ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಮಾಡಬಾರದ್ದನ್ನು ಮಾಡಿ ಸಿಕ್ಕಿಹೊಕಿಕೊಂಡಿದ್ದಾರೆ. ಅಧಿಕಾರವನ್ನೂ, ಗೌರವವನ್ನೂ ಕಳೆದುಕೊಂಡಿದ್ದಾರೆ. ಉಚ್ಛ್ರಾಯ ಸ್ಥಿತಿ ತಲುಪಿದ ಸಂದರ್ಭದಲ್ಲಿ ಇಂತಹ ಸ್ಥಿತಿಗೆ ಸಿಲುಕಲು ಅವರು ಮಾಡಿದ ತಪ್ಪೆಂದೆೃರೆ ಎಚ್ಚರ ತಪ್ಪಿದ್ದು. ಅಥವಾ ತಮ್ಮ ಸುತ್ತಲಿರುವ ಕೆಲವರನ್ನು ಕುರುಡಾಗಿ ನಂಬಿದ್ದು.
ರಮೇಶ ಜಾರಕಿಹೊಳಿ ಅವರನ್ನು ಸಿಕ್ಕಿಹಾಕಿಸಬೇಕೆಂದು ಜಾಲಹೆಣೆದಿರಬಹುದಾದವರು ಅಂದುಕೊಂಡಿದ್ದನ್ನು ಸಾಧಿಸಿರಬಹುದು. ಇನ್ನೇನಿದ್ದರೂ ಕಾನೂನು ಹೋರಾಟ. ಆದರೆ ಅದಕ್ಕೆ 2 ಕಾರಣದಿಂದ ಮಹತ್ವವಿಲ್ಲ. ಇಬ್ಬರಿಗೂ ಅದು ಬೇಕಾಗಿಲ್ಲ ಎನಿಸುತ್ತದೆ. ಹಾಗಾಗಿ ಪ್ರಕರಣ ಬೆಳೆಯುವ ಸಾಧ್ಯತೆ ತೀರಾ ಎಂದರೆ ತೀರಾ ಕಡಿಮೆ.
ರಮೇಶ ಜಾರಕಿಹೊಳಿ ಮೊದಲಿನಿಂದಲೂ ಹುಂಬಸ್ವಭಾವ ಬೆಳೆಸಿಕೊಂಡಿದ್ದಾರೆ. ಅವರ ಸಹೋದರರಾದ ಸತೀಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಲ್ಲಿರುವ ತಾಳ್ಮೆ, ಚಾಣಾಕ್ಷತನ, ಸ್ವಂತ ಯೋಚನೆಯ ಸ್ವಭಾವ ರಮೇಶ್ ಜಾರಕಿಹೊಳಿ ಅವರಲ್ಲಿ ಕಡಿಮೆ. ಅವರ ಸುತ್ತ ಕೆಲವರು ವಿಷ ಸರ್ಪದಂತೆ ಸೇರಿಕೊಂಡಿದ್ದಾರೆ. ಅಂತವರನ್ನು ನಂಬಿ ಇಟ್ಟ ಹೆಜ್ಜೆ ಮತ್ತು ಆಡುವ ಮಾತು ಅವರಿಗೆ ಮುಳುವಾಗಿದೆ.
ರಮೇಶ್ ಜಾರಕಿಹೊಳಿ ನೇರಾ ನೇರ ಸ್ವಭಾವದವರು. ಹೇಳಬೇಕೆಂದಿದ್ದನ್ನು ನೇರವಾಗಿ ಹೇಳುತ್ತಾರೆ ಎಂದು ಕೆಲವರು ಪ್ರಶಂಸಿಸುತ್ತಾರೆ. ಆದರೆ ಇದೇ ಸ್ವಭಾವದಿಂದ ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಇನ್ನೊಬ್ಬರ ಗೌರವಕ್ಕೆ ದಕ್ಕೆ ಬರುವ ರೀತಿಯಲ್ಲಿ, ಯಾರದ್ದೋ ಮಾತು ನಂಬಿ, ಆಡಬಾರದ ಜಾಗದಲ್ಲಿ ಆಡಲು ಹೋದರೆ ಅಂತಿಮವಾಗಿ ಇಂತದ್ದರಲ್ಲಿ ಸಿಕ್ಕಿಕೊಳ್ಳಬೇಕಾಗುತ್ತದೆ.
ರಮೇಶ್ ಜಾರಕಿಹೊಳಿ ಬಳಿ ಅಧಿಕಾರ ಇಲ್ಲದಿದ್ದಾಗ ಅವರನ್ನು ದೂರುತ್ತಿದ್ದವರು, ಅವರ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತನಾಡುತ್ತಿದ್ದವರು ಅಧಿಕಾರಕ್ಕೇರುತ್ತಿದ್ದಂತೆ ಸುತ್ತ ಗಿರಕಿಹೊಡೆಯತೊಡಗಿದ್ದಾರೆ. ಹೊಗಳುಭಟರಾಗಿದ್ದಾರೆ. ರಮೇಶ್ ಕೂಡ ಅಂತವರನ್ನು ನಂಬಿದ್ದಾರೆ. ಆದರೆ ಅದರಿಂದ ಎಂತಹ ಅಪಾಯವಿದೆ ಎನ್ನುವುದನ್ನು ಯೋಚಿಸಲಿಲ್ಲ. ವಿಶ್ವಾಸವಿಡಬೇಕಾದವರಲ್ಲಿ ಇಡಲಿಲ್ಲ.
ಹೆಚ್ಚಿನ ಸಂದರ್ಭದಲ್ಲಿ ಅಧಿಕಾರದಲ್ಲಿರುವವರು ಹಾಳಾಗುವುದೇ ಸುತ್ತಲಿರುವ ದುಷ್ಟಕೂಟದಿಂದ, ಹೊಗಳುಭಟರಿಂದ. ರಮೇಶ್ ಜಾರಕಿಹೊಳಿ ಅವರದ್ದೂ ಅದೇ ಆಗಿದೆ.
ಸತೀಶ್ ಜಾರಕಿಹೊಳಿ 2 ದಿನಗಳ ಹಿಂದೆ ಒಂದು ಮಾತು ಹೇಳಿದ್ದಾರೆ. ಅಧಿಕಾರದಲ್ಲಿರುವವರು ಎಚ್ಚರಿಕೆಯಂದಿರಬೇಕು, ತಾಳ್ಮೆಯಿಂದಿರಬೇಕು. ಎಲ್ಲರ ದೃಷ್ಟಿ ನಮ್ಮ ಮೇಲಿರುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು ಎಂದು. ( ರಮೇಶ್ ಜಾರಕಿಹೊಳಿಗೆ ಸತೀಶ್ ಜಾರಕಿಹೊಳಿ ಕಿವಿ ಮಾತು )ಈ ಮಾತನ್ನು ಅರಿತಿದ್ದರೆ ರಮೇಶ್ ಇಂತಹ ಸ್ಥಿತಿಗೆ ತಲುಪುತ್ತಿರಲಿಲ್ಲ. ಇನ್ನು ಮುಂದಾದರೂ ಯಾರು ಹಿತೈಷಿಗಳು, ಯಾರು ಕೇವಲ ತಮ್ಮ ಲಾಭಕ್ಕಾಗಿ ಹೊಗಳುತ್ತಿದ್ದಾರೆ ಎನ್ನುವುದನ್ನು ರಮೇಶ್ ಗಮನಿಸಿ, ಅಂತವರನ್ನು ದೂರ ಇಡುವ ಕೆಲಸ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಮತ್ತೆ ಮೇಲೇಳಲು ಸಾಧ್ಯವಾಗುವುದಿಲ್ಲ.
ರಮೇಶ ಜಾರಕಿಹೊಳಿ ಅಧಿಕಾರಕ್ಕೇರುತ್ತಿದ್ದಂತೆ ಮುತ್ಸದ್ದಿಯಾಗಿ ಬದಲಾಗಬೇಕಿತ್ತು. ಬಹಳ ಗೌರವಯುತವಾಗಿ ನಡೆದುಕೊಳ್ಳಬೇಕಿತ್ತು. ಮೈಕ್ ಹಿಡಿದ ತಕ್ಷಣ ಬಾಯಿಗೆ ಬಂದಂತೆ ಮಾತನಾಡುವ ಸ್ವಭಾವಬಿಡಬೇಕಿತ್ತು. ಹಾಗೆ ಮಾಡಿದ್ದಿದ್ದರೆ ಅವರ ವೈಯಕ್ತಿಕ ಗೌರವ, ಕುಟುಂಬದ ಗೌರವ, ಗೋಕಾಕದ ಗೌರವ, ಬೆಳಗಾವಿ ಜಿಲ್ಲೆಯ ಗೌರವ , ರಾಜ್ಯದ ಗೌರವ, ರಾಜ್ಯ ಸರಕಾರದ ಗೌರವ, ಬಿಜೆಪಿಯ ಗೌರವ ಎಲ್ಲವೂ ಹೆಚ್ಚಾಗುತ್ತಿತ್ತು. ಅಂತಹ ಚಿನ್ನದಂತಹ ಅವಕಾಶ ಅವರಿಗೆ ಸಿಕ್ಕಿತ್ತು.
ಆದರೆ ಹಾಗೆ ಮಾಡಲಿಲ್ಲ. ಅಗ್ಗದ ಪ್ರಚಾರಕ್ಕೋಸ್ಕರ ಮನಬಂದಂತೆ ಮಾತನಾಡತೊಡಗಿದರು. ಯಾವುದು ಸರಿ, ಯಾವುದು ತಪ್ಪು, ಯಾರು ಸರಿ, ಯಾರದು ತಪ್ಪು ಎಂದು ಯೋಚಿಸದೆ, ಬೇರೆಯವರ ಆತ್ಮ ಗೌರವವನ್ನೂ ಲೆಕ್ಕಿಸದೆ ಅದಕ್ಕೆ ದಕ್ಕೆ ತರುವ ರೀತಿಯಲ್ಲಿ ಮಾತನಾಡಿದರು. ರಾಜಕೀಯ ಹೋರಾಟ ಮಾಡಬೇಕಾದಲ್ಲೂ ವೈಯಕ್ತಿಕ ಹೋರಾಟಕ್ಕಿಳಿದರು. ಹಾಗಾಗಿ ವಿರೋಧಿಗಳು ಹೆಚ್ಚಾದರು.
ರಮೇಶ್ ಜಾರಕಿಹೊಳಿ ಅವರ ಸ್ವಭಾವ ತಿದ್ದಲು ಸಹೋದರರಾದ ಸತೀಶ್ ಮತ್ತು ಬಾಲಚಂದ್ರ ಹಲವು ವರ್ಷದಿಂದ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಅನೇಕ ಬಾರಿ ಬಹಿರಂಗವಾಗಿಯೂ ಹೇಳಿದ್ದರು. ಆದರೆ ಅವರ ಮಾತಿಗಿಂತ ತಮ್ಮನ್ನು ಹೊಗಳುವವರ ಮಾತಿಗೇ ಹೆಚ್ಚು ಆದ್ಯತೆ ನೀಡಿ, ಆಗಬಾರದ ಘಟನೆಗೆ ಬಲಿಯಾದರು.
ಈಗ ರಮೇಶ್ ಜಾರಕಿಹೊಳಿ ಕಾನೂನಿನ ಜಾಲಕ್ಕೆ ಸಿಗುವ ಸಾಧ್ಯತೆ ತೀರಾ ಕಡಿಮೆ. ಅವರದ್ದು ಸಮ್ಮತಿ ಸೆಕ್ಸ್ ಇರಬಹುದು. ಅಥವಾ ಹನಿಟ್ರ್ಯಾಪ್ ಇರಬಹುದು. ಯಾವುದಾದರೂ ಕಾನೂನಿನ ಕಣ್ಣಿನಲ್ಲಿ ಅಪರಾಧ ಎಂದು ಸಾಬೀತಾಗುವುದು ಕಷ್ಟ. ಅವರು ಸುಲಭವಾಗಿ ಅದರಿಂದ ಪಾರಾಗಬಹುದು. ಆದರೆ ನೈತಿಕತೆಯ ಪ್ರಶ್ನೆ ಬಂದಾಗ ಅವರು ಜಾರಿದ್ದಾರೆ ಎನ್ನುವುದು ನಿಜ.
ರಮೇಶ್ ಜಾರಕಿಹೊಳಿ ಅವರನ್ನು ಸಿಕ್ಕಿಸಿ, ಅವರ ಅಧಿಕಾರ ಕಸಿಯುವುದು ಈ ಇಡೀ ಪ್ರಕರಣದ ಹಿಂದಿನ ಯೋಜನೆ ಇದ್ದೀತೆಂದು ನೋಡಿದರೆ ಅನಿಸುತ್ತದೆ. ಹಾಗಿದ್ದಲ್ಲಿ, ಯೋಜನೆ ರೂಪಿಸಿದವರು ಯಶಸ್ವಿಯಾಗಿದ್ದಾರೆ. ಅವರಿಗೆ ಮುಂದಿನ ಹೋರಾಟ ಬೇಕಿರಲಿಕ್ಕಿಲ್ಲ. ಹಾಗಾಗಿ ರಮೇಶ್ ಕಾನೂನು ಕೈಯಿಂದ ತಪ್ಪಿಸಿಕೊಂಡು ಬರಬಹುದು. ರಮೇಶ್ ಕೂಡ ನ್ಯಾಯಾಲಯಕ್ಕೆ ಹೋಗುವುದು ಡೌಟ್. ಏಕೆಂದರೆ ನಕಲಿ ವೀಡಿಯೋ ಎಂದು ವಾದಿಸುವುದು, ಸಾಧಿಸುವುದು ಎರಡೂ ಸಾಧ್ಯವಿಲ್ಲ.
ಹಾಗಾಗಿ ಈ ಸಂದರ್ಭವನ್ನು ಅವರು ತಾಳ್ಮೆಯಿಂದ ಎದುರಿಸಿ, ಎಲ್ಲವನ್ನೂ ಜನರು ಮರೆಯುವವರೆಗೆ ಸುಮ್ಮನಿರುವುದೇ ವಿಹಿತ. ನಂತರದಲ್ಲಿ ಯಾವುದು ಸರಿ, ಯಾವುದು ತಪ್ಪು, ಯಾರು ಸರಿ, ಯಾರು ದುಷ್ಟರು ಎನ್ನುವುದನ್ನು ಯೋಚಿಸಿ ಹೆಜ್ಜೆ ಇಡಬೇಕು. ಕಹಿಯಾದರೂ ಸತ್ಯವನ್ನು ಅರಗಿಸಿಕೊಳ್ಳಬೇಕು. ಮತ್ತೆ ಅಧಿಕಾರಕ್ಕೇರುವ ಸಂದರ್ಭ ಬಂದರೆ ಮುತ್ಸದ್ದಿತನದಿಂದ ಹೆಜ್ಜೆ ಇಡುವಂತಾಗಲಿ. ಪಕ್ಷ ಯಾವುದಿದ್ದರೂ, ಸಹೋದರರಾದ ಸತೀಶ್ ಮತ್ತು ಬಾಲಚಂದ್ರ ಅವರ ಸಲಹೆ, ಮಾರ್ಗದರ್ಶನ ಪಡೆದಲ್ಲಿ ರಮೇಶ್ ದಾರಿ ತಪ್ಪಲು ಅವಕಾಶ ಕಡಿಮೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ