ಪ್ರಗತಿವಾಹಿನಿ ಸುದ್ದಿ; ವಿಜಯಪುರ: ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಕಾಂಗ್ರೆಸ್ ನ ನಾಯಕನೊಂದಿಗೆ ಬಿಜೆಪಿಯ ಒಬ್ಬ ಉನ್ನತ ನಾಯಕನೂ ಸೇರಿ ಹೆಣೆದ ತಂತ್ರ ಇದು. ಬಿಜೆಪಿ ಹಾಗೂ ಕಾಂಗ್ರೆಸ್ ನ ಎರಡೂ ಪಕ್ಷದ ಇಬ್ಬರು ಉನ್ನತ ನಾಯಕರಿಂದ ಷಡ್ಯಂತ್ರ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಡಿ ಪ್ರಕರಣದ ಹಿಂದೆ ಇಬ್ಬರು ಉನ್ನತ ನಾಯಕರಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನ ಇಬ್ಬರೂ ನಾಯಕರು ಸೇರಿ ಈ ವ್ಯವಸ್ಥಿತ ತಂತ್ರ ಹೆಣೆದಿದ್ದಾರೆ. ಯುವತಿ ಮೊದಲ ವಿಡಿಯೋದಲ್ಲಿ ಬೀದರ್ ಭಾಷೆ ಮಾತನಾಡುತ್ತಿದ್ದರು. ನಿನ್ನೆ ಬಿಡುಗಡೆಯಾದ ವಿಡಿಯೋದಲ್ಲಿ ಸುಪೀರಿಯರ್ ಕನ್ನಡ ಭಾಷೆ ಇದೆ. ಆ ಉನ್ನತ ನಾಯಕರೇ ಯುವತಿಗೆ ಹೇಳಿಕೊಟ್ಟಿರಬೇಕು. ಸಿಡಿ ಪ್ರಕರಣ ವ್ಯವಸ್ಥಿತ ಷಡ್ಯಂತ್ರ ಎಂದು ಹೇಳಿದರು.
ನಿನ್ನೆ ರಮೇಶ್ ಜಾರಕಿಹೊಳಿ ದೂರು ನೀಡಿದ ತಕ್ಷಣ ಯುವತಿಯ ವಿಡಿಯೋ ಹೇಳಿಕೆ ಬಿಡುಗಡೆಯಾಗುತ್ತೆ. ಅಂದ ಮೇಲೆ ಇಡೀ ಪ್ರಕರಣ ಒಂದು ಪಕ್ಕಾ ಪ್ಲಾನಿಂಗ್. ಎಸ್ ಐಟಿಯಿಂದ ಎಷ್ಟರಮಟ್ಟಿಗೆ ಪಾರದರ್ಶಕ ತನಿಖೆಯಾಗುತ್ತೆ ಗೊತ್ತಿಲ್ಲ. ಎಸ್ ಐಟಿ ಬದಲು ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತ ಎಂದರು.
ಇನ್ನು ಹಲವರ ಸಿಡಿಗಳು ಇವೆ. ಬಿಜೆಪಿಯ ಉನ್ನತ ನಾಯಕನ ಮಗನ ಬಳಿ ಕೆಲವರ ಸಿಡಿ ಹಾಗೂ ಕಾಂಗ್ರೆಸ್ ನ ಉನ್ನತ ನಾಯಕನ ಮನೆಯಲ್ಲಿ ಹಲವು ಸಿಡಿಗಳಿವೆ. ಮೊದಲು ಈ ಬ್ಲಾಕ್ ಮೇಲ್ ಮಾಡುವ ರಾಜಕಾರಣಿಗಳನ್ನು ಜೈಲಿಗಟ್ಟಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಕೆಟ್ಟ ಸಂಸ್ಕೃತಿ ಆರಂಭವಾಗುತ್ತದೆ ಎಂದು ಯತ್ನಾಳ್ ಗುಡುಗಿದ್ದಾರೆ.
ಯಾರನ್ನೂ ಸುಮ್ಮನೇ ಸಿಲುಕಿಸೋಕಾಗಲ್ಲ – ಸತೀಶ್ ಜಾರಕಿಹೊಳಿ
ಸಿಡಿ ಪ್ರಕರಣಕ್ಕೆ ಮಹತ್ವದ ತಿರುವು; ಇಂದು, ನಾಳೆ ನಿರ್ಣಾಯಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ