ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಎಸ್ ಐಟಿ ವಿರುದ್ಧ ಕಿಡಿಕಾರಿರುವ ಸಂಸದ ಡಿ.ಕೆ.ಸುರೇಶ್, ಯುವತಿಗೆ ರಕ್ಷಣೆ ನೀಡದೇ ಆರೋಪಿಯನ್ನೇ ರಕ್ಷಿಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ಮಗಳ ವಯಸ್ಸಿನ ಹೆಣ್ಣುಮಗಳಿಗೆ ಆದ ಅನ್ಯಾಯ, ನೋವಿನ ಬಗ್ಗೆ ಇಂದು ಸರ್ಕಾರವಾಗಲಿ, ಎಸ್ ಐಟಿಯಾಗಲಿ ಚಿಂತಿಸುತ್ತಿಲ್ಲ. ಆಕೆಗೆ ರಕ್ಷಣೆ ನೀಡಬೇಕೆಂದು ಯೋಚಿಸುತ್ತಲೂ ಇಲ್ಲ, ಸರ್ಕಾರ ಅಕ್ರಮ ಚಟುವಟಿಕೆಗಳನ್ನು ಮುಚ್ಚಿಕೊಂಡು ಅಧಿಕಾರ ನಡೆಸುತ್ತಿದೆ. ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕೈಚೆಲ್ಲಿ ಕುಳಿತಿದ್ದಾರೆ. ಇದೊಂದು ಸಿಡಿ ಸರ್ಕಾರ ಎಂದು ವಾಗ್ದಾಳಿ ನಡೆಸುದರು.
ರಾಜ್ಯದಲ್ಲಿ ಜನಪ್ರತಿನಿಧಿಗಳಿಂದ ಹಿಡಿದು ಎಲ್ಲರೂ ಏನೂ ಬೇಕಾದರೂ ಮಾಡಬಹುದು, ಅತ್ಯಾಚಾರವನ್ನೂ ಮಾಡಬಹುದು ನಾವು ರಕ್ಷಣೆ ನೀಡುತ್ತೇವೆ, ಭದ್ರತೆ ಒದಗಿಸುತ್ತೇವೆ ಎಂಬ ರೀತಿಯಲ್ಲಿ ಸರ್ಕಾರ, ಗೃಹ ಸಚಿವರು ನಡೆದುಕೊಳ್ಳುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಎಂಬುದೇ ರಾಜ್ಯದಲ್ಲಿ ಇಲ್ಲದಾಗಿದೆ. ಸಿಡಿ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಿ ತನಿಖೆ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಎತ್ತಿಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರಿಗೆ ಬಟ್ಟೆ ಬಿಚ್ಚಲು ಯಾರು ಹೇಳಿದ್ದು? ಅವರೇ ಮಾಡಿದ್ದಲ್ಲವೇ? ಇಷ್ಟಾಗ್ಯೂ ಅವರನ್ನು ರಕ್ಷಿಸಲು ಸರ್ಕಾರ ಯತ್ನಿಸುತ್ತಿದೆ. ಯಾಕೆಂದರೆ ಸರ್ಕಾರ ತಂದವರು ಅವರೇ. ಸರ್ಕಾರ ಬೀಳಿಸೋದೂ ಅವರೇ ಎಂಬ ಆತಂಕದಲ್ಲಿ ಬಿಜೆಪಿ ಇದೆ. ಜನರಿಗೆ, ಮಹಿಳೆಯರಿಗೆ ರಕ್ಷಣೆ ಕೊಡಬೇಕಾದ ಸರ್ಕಾರ ಇಂದು ಮಹಿಳೆಯರ ರಕ್ಷಣೆಗೆ ಸರ್ಕಾರ ಇಲ್ಲ ಎಂಬ ಸಂದೇಶವನ್ನು ರವಾನಿಸಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಗೌರವಯುತವಾಗಿ ಕೆಲಸ ಮಾಡಲಿ: ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ