*ಆಡಿಯೋ, ದಾಖಲೆಗಳಿವೆ, 20 ಸಿಡಿಗಳಿವೆ ಎನ್ನುತ್ತಲೇ ಯಾವುದನ್ನೂ ಬಿಡುಗಡೆ ಮಾಡಲ್ಲ ಎಂದ ರಮೇಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ವೈಯಕ್ತಿಕ ಜಿದ್ದು ಇದೆ, ಇದೊಂದು ವೈಯಕ್ತಿಕ ಯುದ್ಧ. ಓರ್ವ ಮಹಿಳೆಯ ಮೂಲಕ ಸಿಡಿ ಷಡ್ಯಂತ್ರ ನಡೆಸಿ ನನ್ನ ತೇಜೋವಧೆ ಮಾಡಿದ್ದು ಡಿಕೆಶಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ರಾಜಕೀಯವಾಗಿ ಅವರಿಗಿಂತ ಎತ್ತರಕ್ಕೆ ಬೆಳೆಯುತ್ತೇನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಡಿ.ಕೆ.ಶಿವಕುಮಾರ್ ಸಂಚು ಮಾಡಿದರು. ನನ್ನನ್ನು ಟಾರ್ಗೆಟ್ ಮಾಡಿ ನನ್ನ ವೈಯಕ್ತಿಕ ಜೀವನವನ್ನೇ ಹಾಳು ಮಾಡಿದರು. ಯಾರದ್ದೇ ವೈಯಕ್ತಿಕ ಜೀವನ ಹಾಳಾಗುತ್ತಿದೆ ಎಂದರೆ ಸಹಾಯ ಮಾಡಬೇಕೇ ಹೊರತು ಅದನ್ನು ಮತ್ತಷ್ಟು ಕೆಡಿಸುವುದು ಮಾನವೀಯತೆಯಲ್ಲ. ಆದರೆ ನನ್ನ ವಿರುದ್ಧ ಸಿಡಿ ಷಡ್ಯಂತ್ರ ನಡೆಸಿ ಸಿಡಿ ಬಿಡುಗಡೆ ಮಾಡಿದರು. ಅಂದು ಸಿಡಿ ಬಿಡುಗಡೆಯಾದಾಗ ಮಾಡದ ತಪ್ಪನ್ನು ಒಪ್ಪಿಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ನನ್ನನ್ನು ರಾಜಕೀಯವಾಗಿ ಮುಗಿಸಲು ಸಿಡಿ ಷಡ್ಯಂತ್ರಕ್ಕೆ 40 ಕೋಟಿ ಖರ್ಚು ಮಾಡಿದ್ದಾಗಿ ಹೇಳಿದ್ದಾರೆ, ಈ ಬಗ್ಗೆ ಅವರ ಆಡಿಯೋ ಇದೆ. ಸಿಡಿ ಷಡ್ಯಂತ್ರದ ಆ ಯುವತಿಯನ್ನು ಬಂಧಿಸಿದರೆ ಎಲ್ಲವೂ ಹೊರಬರಲಿದೆ. ಸಿಡಿ ಆರೋಪಿಗಳಾದ ನರೇಶ್, ಶ್ರವಣ್, ಯುವತಿ ಹಾಗೂ ಡಿ.ಕೆ.ಶಿವಕುಮಾರ್ ಹಾಗೂ ಕಂಪನಿ ಬಂಧನವಾಗಬೇಕು ಎಂದು ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ ರಾಜ್ಯದ 120 ಜನರ ಸಿಡಿ ಮಾಡಿಟ್ತುಕೊಂಡಿದ್ದಾರೆ. ನನ್ನ ಬಳಿಯೂ 20 ಸಿಡಿಗಳಿವೆ. 128 ಸಾಕ್ಷ್ಯಗಳಿವೆ. ಸಾಕಷ್ಟು ದಾಖಲೆಗಳು ಇವೆ. ಆದರೆ ಯಾವುದೇ ದಾಖಲೆ, ಆಡಿಯೋವನ್ನು ಈಗ ನಾನು ಬಿಡುಗಡೆ ಮಾಡಲ್ಲ. ಎಲ್ಲವನ್ನು ಸಿಬಿಐ ಅಧಿಕಾರಿಗಳಿಗೆ ಒಪ್ಪಿಸುತ್ತೇನೆ. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಡಿ.ಕೆ.ಶಿವಕುಮಾರ್ ಹಾಗೂ ನಾನು ಮೊದಲು ಅಣ್ಣ-ತಮ್ಮಂದಿರಂತೆ ಇದ್ದವರು. ಆದರೆ ಕೋ ಆಪರೇಟಿವ್ ಸೊಸೈಟಿಯೊಂದಕ್ಕೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಳ್ಳಲು ನಾನು ಸಹಕಾರ ಸಚಿವನಿದ್ದಾಗ ಬಂದಿದ್ದರು. ನಾನು ಒಪ್ಪಿಲ್ಲ ಎಂದು ಸೇಡು ತೀರಿಸಿಕೊಂಡರು ಎಂದ ಎಂದ ಆರೋಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ