ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ಕೋವಿಡ್-೧೯ ನಿಯಂತ್ರಣದ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿರುವ ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಜೂ.5) ನಡೆದ ಕೋವಿಡ್-೧೯ ನಿಯಂತ್ರಣ ಹಾಗೂ ನೆರೆಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅತ್ಯುತ್ತಮ ಕೆಲಸ ಮಾಡಿದೆ. ಜನಪ್ರತಿನಿಧಿಗಳು ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ನೆರೆಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಉನ್ನತಮಟ್ಟದ ಸಮಿತಿ ರಚನೆಗೆ ಕ್ರಮಕೈಗೊಳ್ಳಲಾಗುವುದು.
ನೆರೆಹಾವಳಿ ಸವಾಲು ಎದುರಿಸಲು ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು.
ದೆಹಲಿಯಿಂದ ತಬ್ಲಿಘಿಗಳು, ಅಜ್ಮೇರ್ ನಿಂದ ಜನರು ಹಿಂದಿರುಗಿದ ಬಳಿಕವೂ ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿತ್ತು. ಇದೀಗ ಮಹಾರಾಷ್ಟ್ರದಿಂದ ಅತೀ ಹೆಚ್ಚು ಜನರು ಬರುತ್ತಿರುವುದರಿಂದ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವರು ತಿಳಿಸಿದರು.
ಬಳ್ಳಾರಿ ನಾಲಾ ಸ್ವಚ್ಛತೆಗೆ ಸೂಚನೆ:
ಬಳ್ಳಾರಿ ನಾಲಾ ಕಳೆದ ಬಾರಿ ದೊಡ್ಡ ಅನಾಹುತ ಆಗಿದೆ. ಆದ್ದರಿಂದ ಬೃಹತ್ ಹಿಟಾಚಿ ಬಳಸಿಕೊಂಡು ನಾಲಾ ಸ್ವಚ್ಛತೆ ಕೈಗೊಳ್ಳಬೇಕು ಎಂದು ಪಾಲಿಕೆಯ ಆಯುಕ್ತರಿಗೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು.
ನಾಲಾ ಅತಿಕ್ರಮಣ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ವೆ ಕಾರ್ಯ ಮುಂದುವರಿಸಲು ತಿಳಿಸಿದರು. ಮುಂದಿನ ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಕೋವಿಡ್-೧೯ ಸೋಂಕಿತ ಮಕ್ಕಳ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಇದಲ್ಲದೇ ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಕೊರೊನಾ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ತೊಂದರೆಗೆ ಸಿಲುಕಿರುವ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ವರದಿ ಬರುವ ಮುಂಚೆಯೇ ಮನೆಗೆ: ಸತೀಶ್ ತರಾಟೆ
ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಮಳೆಗಾಲ ಆರಂಭಗೊಂಡಿರುವುದರಿಂದ ರೈತರು ಹಾಗೂ ವರ್ತಕರ ಹಿತದೃಷ್ಟಿಯಿಂದ ಎಪಿಎಂಸಿ ವಹಿವಾಟು ಒಂದೇ ಕಡೆ ಆರಂಭಿಸಬೇಕು ಎಂದು ಮನವಿ ಮಾಡಿಕೊಂಡರು.
ಕ್ವಾರಂಟೈನ್ ಇರುವವರನ್ನು ವರದಿ ಬರುವ ಮುಂಚೆಯೇ ಮನೆಗೆ ಕಳಿಸಿದ್ದರಿಂದ ಕೆಲವು ಭಾಗಗಳಲ್ಲಿ ಸೋಂಕು ಹರಡಿದೆ. ಇದೀಗ ತಪಾಸಣೆ ಕಡಿಮೆಗೊಳಿಸಿದರೆ ಸೋಂಕು ಮತ್ತಷ್ಟು ಹರಡುವ ಸಾಧ್ಯತೆಯಿದೆ. ಆದ್ದರಿಂದ ತಪಾಸಣೆ ಪ್ರಮಾಣ ಇನ್ನಷ್ಟು ಹೆಚ್ವಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಘೋಷಿಸಿರುವ ಪ್ಯಾಕೇಜ್ ಲಾಭ ಮಾಲೀಕರ ಜತೆಗೆ ದುಡಿಯುತ್ತಿರುವ ಜನರಿಗೂ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಮಹಾಂತೇಶ ದೊಡಗೌಡ್ರ, ತರಕಾರಿ ಮತ್ತು ತೋಟಗಾರಿಕೆ ಬೆಳೆಗಾರರಿಗೆ ಆಗಿರುವ ಹಾನಿ ಭರಿಸಲು ಅಗತ್ಯ ಕ್ರಮ ವಹಿಸಬೇಕು ಎಂದರು.
ದೇವಸ್ಥಾನ ಆರಂಭ ಸದ್ಯಕ್ಕೆ ಬೇಡ:
ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ರಾಯಬಾಗ ತಾಲ್ಲೂಕಿನ ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೆ ಮಹಾರಾಷ್ಟ್ರದ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುವುದರಿಂದ ದೇವಸ್ಥಾನವನ್ನು ಸದ್ಯಕ್ಕೆ ಆರಂಭಿಸಬಾರದು ಎಂದು ಮನವಿ ಮಾಡಿಕೊಂಡರು.
ನೇಕಾರರಿಂದ ಸೀರೆ ಖರೀದಿಸಲು ಸಲಹೆ:
ಶಾಸಕ ಅಭಯ್ ಪಾಟೀಲ ಮಾತನಾಡಿ, ನೇಕಾರರಿಗೆ ಕಿಟ್ ಹಂಚಿಕೆಯ ಬಗ್ಗೆ ಉಂಟಾಗಿರುವ ಗೊಂದಲ ಸರಿಪಡಿಸುವಂತೆ ಕೋರಿದರು.
ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ಗಮನಸೆಳೆಯಲಾಗಿದೆ.
ಕೊರೊನಾ ವಾರಿಯರ್ಸ್ ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಮತ್ತಿತರರಿಗೆ ಹಂಚಿಕೆ ಮಾಡಲು ನೇಕಾರರಿಂದ ಸರ್ಕಾರವೇ ನೇರವಾಗಿ ಸೀರೆಗಳನ್ನು ಖರೀದಿಸಬೇಕು ಎಂದು ಅಭಯ್ ಪಾಟೀಲ ಸಲಹೆ ನೀಡಿದರು.
ನಾಲಾ ಅತಿಕ್ರಮಣ ತೆರವುಗೊಳಿಸಲು ಒತ್ತಾಯ:
ನಗರದಲ್ಲಿ ನಾಲಾಗಳ ಅತಿಕ್ರಮಣ ತೆರವುಗೊಳಿಸಿದರೆ ಮಾತ್ರ ಮಳೆಗಾಲದಲ್ಲಿ ಅನಾಹುತ ತಪ್ಪಿಸಬಹುದು. ಆದ್ದರಿಂದ ನಿರ್ದಾಕ್ಷಿಣ್ಯವಾಗಿ ನಾಲಾ ಅತಿಕ್ರಮಣ ತೆರವುಗೊಳಿಸಬೇಕು ಎಂದು ಶಾಸಕ ಪಾಟೀಲ ಆಗ್ರಹಿಸಿದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಕೋವಿಡ್-೧೯ ತಪಾಸಣೆಗೆ ಸಂಬಂಧಿಸಿದಂತೆ ಚಿಕ್ಕೋಡಿಯಲ್ಲೂ ಪ್ರತ್ಯೇಕವಾದ ವ್ಯವಸ್ಥೆ ಆರಂಭಿಸುವ ಅಗತ್ಯವಿದೆ ಎಂದರು.
ಶಾಸಕ ಅನಿಲ್ ಬೆನಕೆ, ಅಂತರರಾಜ್ಯ ಪ್ರಯಾಣಿಕರ ಸಂಚಾರ, ಮದುವೆ ಸಮಾರಂಭಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಶಾಲೆಗಳು ಆರಂಭಿಸುವ ಮುಂಚೆ ಸ್ವಚ್ಛತೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ, ಕಳೆದ ವರ್ಷ ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವವರಿಗೆ ಕೆಲವರಿಗೆ ತಾಂತ್ರಿಕ ಕಾರಣಕ್ಕೆ ಪರಿಹಾರದ ಮೊತ್ತ ತಲುಪಿಲ್ಲ. ಈ ಬಗ್ಗೆ ಮರು ಸಮೀಕ್ಷೆ ನಡೆಸಿ ತಕ್ಷಣವೇ ಪರಿಹಾರ ನೀಡಬೇಕು ಎಂದು ಹೇಳಿದರು.
ಕೋವಿಡ್ 1411 ವರದಿ ಬಾಕಿ:
ಕೊರೊನಾಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 97 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 1411 ಮಾದರಿಗಳ ವರದಿ ಬರಬೇಕಿದೆ
ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 48 ಕಂಟೈನ್ಮೆಂಟ್ ಝೋನ್ ಘೋಷಣೆ ಮಾಡಲಾಗಿದ್ದು, 9 ಡಿನೋಟಿಫೈ ಮಾಡಲಾಗಿರುತ್ತದೆ. ಸದ್ಯಕ್ಕೆ ಇನ್ನೂ 39 ಕಂಟೈನ್ಮೆಂಟ್ ಝೋನ್ ಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿವರಿಸಿದರು.
ಕಂಟೈನ್ಮೆಂಟ್ ಝೋನ್ ಗಳಲ್ಲಿ ಜನರ ಮನೆಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗಿದೆ.
ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಯ ಮೂಲಕ 45 ಸಾವಿರ ಜನರು 7 ಸಾವಿರ ವಾಹನಗಳು ಪ್ರಯಾಣ ಕೈಗೊಂಡಿದ್ದಾರೆ.
ಸರ್ಕಾರದ ಹೊಸ ಮಾರ್ಗಸೂಚಿವ ಪ್ರಕಾರ ಇನ್ನು ಮುಂದೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಮುಂದಿನ ಹದಿನಾಲ್ಕು ದಿನ ಹೋಮ್ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ಜನಸಂದಣಿ ನಿರ್ವಹಣೆ ಸವಾಲು ಆಗಿತ್ತು. ಆದ್ದರಿಂದ ನಗರದ ಮೂರು ದಿಕ್ಕುಗಳಲ್ಲಿ ಪ್ರತ್ಯೇಕ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಇದೀಗ ಒಂದೇ ಕಡೆ ವಹಿವಾಟು ನಡೆಸಲು ವರ್ತಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದಲ್ಲದೇ ಮುಂಬರುವ ದಿನಗಳಲ್ಲಿ ದೇವಸ್ಥಾನ ಆರಂಭಗೊಳ್ಳಲಿರುವುದರಿಂದ ಹೊಸ ಸವಾಲು ಎದುರಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿವರಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಸ್ಯಾನಿಟೈಜೇಷನ್ ಮಾಡಲಾಗುವುದು. ಮಾಸ್ಕ್, ಸ್ಯಾನಿಟೈಸರ್ ಕೂಡ ಒದಗಿಸಲಾಗುವುದು ಎಂದು ಡಾ.ಬೊಮ್ಮನಹಳ್ಳಿ ವಿವರಿಸಿದರು.
ಪ್ರವಾಹ ಮುನ್ನೆಚ್ಚರಿಕೆಗೆ ಸೂಚನೆ:
ಕಳೆದ ಬಾರಿಯ ಪ್ರವಾಹ ಸ್ಥಿತಿಗತಿಯನ್ನು ಅಧ್ಯಯನ ನಡೆಸಿ ಈ ಬಾರಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿವರಿಸಿದರು.
ಮುಂಗಾರು ಶೇ. 256 ಹೆಚ್ಚಾಗಿದ್ದು, ಬೀಜ-ಗೊಬ್ಬರ ವಿತರಣೆಗೆ ಕ್ರಮ ವಹಿಸಲಾಗಿದೆ.
ಪ್ರವಾಹ ನಿರ್ವಹಣೆಗೆ ತಾಲ್ಲೂಕು ಮಟ್ಟದ ಟಾಸ್ಕಫೋರ್ಸ್ ಸಭೆ ನಡೆಸಲು ಸೂಚನೆ ನೀಡಿದರು.
ಪಿಪಿಇ ಕಿಟ್ ಹಾಗೂ ಔಷಧ ಸಾಮಗ್ರಿ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ವಿ.ಮುನ್ಯಾಳ ವಿವರಿಸಿದರು.
9 ತಾಲ್ಲೂಕು ಆಸ್ಪತ್ರೆಗಳಲ್ಲೂ ತುರ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಸಿಇಓ ಡಾ.ರಾಜೇಂದ್ರ ಕೆ.ವಿ., ಕೋವಿಡ್-೧೯ ವಿಶೇಷ ನಿಯಂತ್ರಣಾಧಿಕಾರಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಡುಗಡೆಗೊಳಿಸಿದರು.
ಮಹನೀಯರ ಪುತ್ಥಳಿಗೆ ಮಾಲಾರ್ಪಣೆ
ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಶುಕ್ರವಾರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಜಲಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಜಾರಕಿಹೊಳಿ ಅವರು ಕಿತ್ತೂರು ಚೆನ್ನಮ್ಮ, ಶಿವಾಜಿ, ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ವಿವಿಧ ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.
ಗೋಕಾಕದಿಂದ ನೇರವಾಗಿ ಕಿತ್ತೂರು ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಸಚಿವರು, ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಇದಾದ ಬಳಿಕ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಛತ್ರಪತಿ ಶಿವಾಜಿ ಹಾಗೂ ಬಸವೇಶ್ವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.
ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಕಿರಣ ಜಾಧವ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ಪ್ರವಾಸಿಮಂದಿರಕ್ಕೆ ತೆರಳಿದ ನೂತನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ನೂರಾರು ಬೆಂಬಲಿಗರು ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ