ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ಚರ್ಚೆ ವೇಳೆ ಸ್ವಪಕ್ಷದವರೇ ನನ್ನ ಬೆಂಬಲಕ್ಕೆ ಬರಲಿಲ್ಲವೆಂದು ಅಸಮಾಧಾನಹೊರಹಾಕಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, ರಾಜೀನಾಮೆ ನೀಡುವುದಾಗಿ ಹೇಳಿದ ಘಟನೆ ನಡೆದಿದೆ.
ಸದನದಲ್ಲಿ ಚರ್ಚೆ ವೇಳೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್. ಪ್ರಮುಖ ರಾಜಕೀಯ ಪಕ್ಷಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿವೆ. ಹಲವು ವರ್ಷ ಆಡಳಿತ ನಡೆಸಿದ ಪಕ್ಷಗಳೂ ದೇಶದಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಪರೋಕ್ಶವಾಗಿ ಕಾಮ್ಗ್ರೆಸ್ ಗೆ ಟಾಂಗ್ ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ರಮೇಶ್ಕುಮಾರ್ ಸುಧಾಕರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಸುಧಾಕರ್ ಅವರು, ನಾನು ಯಾವುದೇ ಪಕ್ಷದ ಹೆಸರು ಹೇಳಲಿಲ್ಲ ಎಂದು ಸಮಜಾಯಿಷಿ ನೀಡಿದರು.
ಅಲ್ಲದೇ ತುರ್ತು ಪರಿಸ್ಥಿತಿ ಬಗ್ಗೆ ಸುಧಾಕರ್ ಪ್ರಸ್ತಾಪ ಮಾಡಿದಾಗ ರಮೇಶ್ ಕುಮಾರ್, ತುರ್ತು ಪರಿಸ್ಥಿತಿ ಬಗ್ಗೆ ನಿಮಗೆ ಮಾತಾಡುವ ಹಕ್ಕಿಲ್ಲ, ನೀವು ಪಕ್ಷಾಂತರಿ ಎಂದು ಆಕ್ಷೇಪ ಮತ್ತೆ ವ್ಯಕ್ತಪಡಿಸಿದರು. ತುರ್ತುಪರಿಸ್ಥಿತಿ ಬಗ್ಗೆ ಯಡಿಯೂರಪ್ಪ ಮಾತಾಡಲಿ ನಾನು ಸುಮ್ಮನಿರುತ್ತೇನೆ ಎಂದರು. ಸುಧಾಕರ್ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತಾತ್ಕಾಲಿಕ ಅಂದಾಗ ಅಂಬೇಡ್ಕರ್ ಒಪ್ಪಿದ್ದರು, 70 ವರ್ಷ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮುಂದುವರೆಸಲಾಯ್ತು. ಕಾಶ್ಮೀರದಲ್ಲಿ ಅರಾಜಕತೆ, ಭಯೋತ್ಪಾದನೆ ಹೆಚ್ಚಾಗಲು ಕಾಂಗ್ರೆಸ್ ಕಾರಣ ಎಂದಾಗ ಕೋಪಗೊಂದ ರಮೇಶ್ ಕುಮಾರ್ ಸದನದ ಬಾವಿಗಿಳಿದು ಗದ್ದಲ ಆರಂಭಿಸಿದರು. ಆಡಳಿತ ಹಾಗೂ ವಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಕಲಾಪ ಮುಂದೂಡಲಾಯಿತು.
ಸದನಿಂದ ಹೊರ ಬಂದ ರಮೇಶ್ ಕುಮಾರ್, ಚರ್ಚೆ ವೇಳೆ ನನ್ನ ಬೆಂಬಲಕ್ಕೆ ನಮ್ಮವರೇ ಬರಲಿಲ್ಲ. ಹೀಗಿರುವಾಗ ನಾನೇಕೆ ಶಾಸಕನಾಗಿರಲಿ. ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರ ಹಾಕಿದರು. ರಾಜೀನಾಮೆ ಪತ್ರವನ್ನು ಟೈಪ್ ಮಾಡಿಕೊಂಡು ತರುವಂತೆ ತಮ್ಮ ಆಪ್ತ ಸಹಾಯಕನಿಗೆ ಸೂಚಿಸಿದ್ದಾರೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು, ರಮೇಶ್ಕುಮಾರ್ ಅವರನ್ನು ಸಮಾಧಾನಪಡಿಸಿದರು ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ