Kannada NewsKarnataka NewsLatest

‘ಸ್ಮಾರ್ಟ್’ ಅರ್ಥವೇ ಅಪಾರ್ಥವಾಗಿಸುವ ರಾಮತೀರ್ಥನಗರದ ರಸ್ತೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿ ನಗರ ಆಯ್ಕೆಯಾದಾಗ ಇಲ್ಲಿನ ಜನತೆಯಿಂದ ಅಪಾರ ಹೆಮ್ಮೆ ವ್ಯಕ್ತವಾಗಿತ್ತು. ಆದರೆ ಗಜಪ್ರಸವದಂತೆ ಮುಂದುವರಿದ ಕಾಮಗಾರಿಗಳು, ಅವುಗಳ ವೈಖರಿ ಇದೀಗ ಜನರನ್ನು ಭ್ರಮನಿರಸನಗೊಳಿಸಿವೆ.

ಸ್ಮಾರ್ಟ್ ಸಿಟಿ ಯೋಜನೆ ಹಣೆಬರಹ ಹೇಳುವ ರಸ್ತೆಯೊಂದು ಇಲ್ಲಿನ ರಾಮತೀರ್ಥನಗರದಲ್ಲಿ ಎಲ್ಲರ ಗಮನ ಸೆಳೆದಿದೆ. ಇದನ್ನು ಕಂಡವರು ಕೇಳುವ ಒಂದೇ ಪ್ರಶ್ನೆ “ಸ್ಮಾರ್ಟ್ ಆಗಿದ್ದು ಸಿಟಿಯೋ, ಕಾಮಗಾರಿಯೋ ಅಥವಾ ಅದನ್ನು ನಿರ್ವಹಿಸಿದವರೋ?” ಎಂಬುದು.

ರಾಮತೀರ್ಥನಗರದಲ್ಲಿರುವ ಈ ರಸ್ತೆಯನ್ನು ಬೆಳಗಾವಿ ಸ್ಮಾರ್ಟ್ ಸಿಟಿ ನಿರ್ಮಿಸಿದೆ. ಇಲ್ಲಿ ಸಂಚರಿಸುವಾಗ ಮೊದಲಿದ್ದ ರಸ್ತೆಯೇ ಸ್ಮಾರ್ಟ್ ಆಗಿತ್ತು ಎಂದೆನಿಸಿದರೆ ಆಶ್ವರ್ಯವಿಲ್ಲ. ರಸ್ತೆಯುದ್ದಕ್ಕೂ ಅಮರಿಕೊಂಡ ಕಪ್ಪು ಮಣ್ಣಿನ ರಾಡಿ ಅಂದಗೇಡಿತನಕ್ಕೆ ಕನ್ನಡಿ ಹಿಡಿದಂತಿದೆ. ಬುಡಾ ಗುತ್ತಿಗೆದಾರರು ಎಲ್ಲೆಂದರಲ್ಲಿ ಮಣ್ಣನ್ನು ರಸ್ತೆಗೆ ಚೆಲ್ಲಿದ್ದಾರೆ. ಇದೀಗ ಒಣಗಿರುವುದರಿಂದ ವಾಹನವೊಂದು ಹಾದು ಹೋಗುತ್ತಿದ್ದಂತೆ ಹಿಂದಿನವರು ಧೂಳು ಮುಕ್ಕುತ್ತ ಸಾಗುವ ಪ್ರಾರಬ್ಧ ಬಂದೊದಗಿದೆ.

ಈ ರಸ್ತೆಯಲ್ಲಿ ಫುಟ್ ಪಾಥ್ ಕಾಣುವುದೇ ಇಲ್ಲ. ರಸ್ತೆಯ ಪಕ್ಕದಲ್ಲಿ ಕೈಗಾರಿಕಾ ಸೈಟ್ ಮಾಲೀಕರಿಂದ ಸುರಿಯಲ್ಪಟ್ಟ ಭಾರೀ ಪ್ರಮಾಣದ ಕಸದ ರಾಶಿ ಇಡೀ ಪ್ರದೇಶವನ್ನು ಕೊಳಗೇರಿ ಸದೃಶವಾಗಿಸಿದೆ.

ರಸ್ತೆ ಪಕ್ಕ ಹಂದಿಗಳು ಸತ್ತುಬಿದ್ದು ಅವುಗಳ ದೇಹ ಕೊಳೆತು ನಾರುತ್ತಿದ್ದರೂ ಯಾರೂ ಸ್ವಚ್ಛಗೊಳಿಸುವ ಮತ್ತು ಕಾಳಜಿ ವಹಿಸುವುದಿಲ್ಲ. ಹಂದಿಗಳ ಕಳೆಬರದ ಮೇಲೆ ಕಣ್ಣು ಹಾಯದಂತೆ ಜನ ಮುಖ ತಿರುಗಿಸಿಕೊಂಡು, ಮೂಗು ಹಿಡಿದು ತಿರುಗುವಂತಾಗಿದೆ.

ಒಂದು ವರ್ಷದಲ್ಲಿ ರಸ್ತೆಗಳು ಮತ್ತು ಗಟಾರಗಳು ಬಿರುಕು ಬಿಟ್ಟಿವೆ. ಕಾಮಗಾರಿಯ ಗುಣಮಟ್ಟ ಕಣ್ಣಲ್ಲೇ ಅಳೆಯುತ್ತಿರುವ ಜನರಿಗೆ ‘ಸ್ಮಾರ್ಟ್’ ಎಂಬ ಶಬ್ದದ ಅರ್ಥವೇ ಅಪಾರ್ಥವಾಗಿ ಕಾಣುವಂತಾಗಿದೆ. ಈಗಾಗಲೇ ಹಲವರು ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದಿದ್ದು ಜನರ ಪಾಲಿಗೆ ಅಧಿಕಾರಿಗಳ ಸ್ವಯಂ ಪ್ರೇರಣೆಯ ‘ಜ್ಞಾನೋದಯ’ ಸಮಯದ ಪ್ರತೀಕ್ಷೆ ಬಿಟ್ಟರೆ ಉಳಿದೆಲ್ಲ ಭರವಸೆಗಳೂ ಕಳೆದುಹೋದಂತಾಗಿದೆ.

ಏಮ್ಸ್ ಆಸ್ಪತ್ರೆ ಸರ್ವರ್ ಆರನೇ ದಿನವೂ ಸ್ತಬ್ಧ; 200 ಕೋಟಿ ಕ್ರಿಪ್ಟೋ ಕರೆನ್ಸಿಗೆ ಬೇಡಿಕೆಯಿಟ್ಟ ಹ್ಯಾಕರ್ ಗಳು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button