Kannada NewsLatest

ರಾಣಿ ಚನ್ನಮ್ಮ ವಿವಿಯನ್ನು ಕಿತ್ತೂರಿಗೆ ಶಿಫ್ಟ್ ಮಾಡಲು ಆಗ್ರಹ

ಪ್ರಗತಿವಾಹಿನಿ ಸುದ್ದಿ; ಕಿತ್ತೂರು: ಭೂತರಾಮನಹಟ್ಟಿಯಿಂದ ಸ್ಥಳಾಂತರಗೊಳ್ಳುತ್ತಿರುವ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವನ್ನು ಐತಿಹಾಸಿಕ ಕಿತ್ತೂರು, ಚನ್ನಮ್ಮಾಜಿ ಕರ್ಮಭೂಮಿಗೆ ಸ್ಥಳಾಂತರಿಸಬೇಕು ಎಂದು ಕೆಪಿಸಿಸಿ ವೀಕ್ಷಕ ಬಂಗಾರೇಶ ಹಿರೇಮಠ ಒತ್ತಾಯಿಸಿದ್ದಾರೆ.

ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವನ್ನು ಬಾಗೇವಾಡಿಗೆ ಸ್ಥಳಾಂತರ ಮಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಧೋರಣೆ ಖಂಡಿಸಿ ಕಿತ್ತೂರು ಬ್ಲಾಕ್ ಕಾಂಗ್ರೇಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಬಂಗಾರೇಶ ಹಿರೇಮಠ, ವಿಶ್ವ ವಿದ್ಯಾಲಯ ಸ್ಥಳಾಂತರ ವಿಷಯದಲ್ಲಿ ಶಾಸಕರು ಸ್ಪಷ್ಟ ನಿಲುವು ಹೊಂದಬೇಕು. ಬೆಳಗಾವಿಯಲ್ಲಿನ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವನ್ನು ಕಿತ್ತೂರಿಗೆ ಸ್ಥಳಾಂತರಿಸದೇ ಬಾಗೇವಾಡಿಗೆ ಸ್ಥಳಾಂತರ ಮಾಡಲು ಹೊರಟಿರುವ ರಾಜ್ಯ ಸರಕಾರದ ಕ್ರಮ ಸರಿಯಲ್ಲ. ಈ ಮೂಲಕ ಕಿತ್ತೂರು ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಬಿಜೆಪಿ ಸರಕಾರ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.

ಶಾಸಕರು ಕೂಡಲೇ ವಿವಿಯನ್ನು ಕಿತ್ತೂರಿಗೆ ತರುವ ಇಚ್ಚಾಶಕ್ತಿ ಪ್ರರ್ದಶಿಸಬೇಕು. ಇಲ್ಲವಾದಲ್ಲಿ ಕಿತ್ತೂರು ಸುತ್ತಮುತ್ತಲ್ಲಿನ ಎಲ್ಲ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗೂಡಿಸಿ ಸ್ವಾಮೀಜಿಗಳ ನೆತೃತ್ವದಲ್ಲಿ ಉಗ್ರ ಹೊರಾಟ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು.

Home add -Advt

ನಮ್ಮ ದೇಶ ಕೃಷಿ ಅವಲಂಭಿತವಾಗಿದ್ದರಿಂದ ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ರೈತರಿಗೆ ಊಳುವವನೆ ಭೂಮಿಯ ಒಡೆಯ ಎಂಬ ಹಕ್ಕು ನೀಡಿದರು. ಕಾಂಗ್ರೆಸ್ ಪಕ್ಷವು ರೈತರ ಹಿತ ಕಾಪಾಡುವ ಪಕ್ಷ ಎಂದರು. ರೈತರನ್ನು ಹತ್ತಿಕ್ಕುವ ಮಸೂದೆಗಳನ್ನು ಜಾರಿಗೆ ತರುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದರು.

ಉತರ ಪ್ರದೇಶದ ಹತ್ರಾಸ್ ಎಂಬಲ್ಲಿ ದಲಿತ ಮಹಿಳೆ ಮೇಲೆ ನಡೆದ ಅತ್ಯಾಚಾರ ಸಮಾಜ ತಲೆ ತಗ್ಗಿಸುವಂತಾಗಿದೆ. ಅಲ್ಲದೇ ಹತ್ರಾಸ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರನ್ನು ತಡೆದು ಪೋಲಿಸರು ಅನುಚಿತವಾಗಿ ವರ್ತಿಸಿರುವುದು ಖಂಡನೀಯ ಎಂದು ಹೇಳಿದರು.

ಪ್ರತಿಭಟನೆ ಬಳಿಕ ವಿಶ್ವ ವಿದ್ಯಾಲಯವನ್ನು ಕಿತ್ತೂರಿಗೆ ಸ್ಥಳಾಂತರಿಸುವಂತೆ ಕಿತ್ತೂರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಣಕುಮಾರ ಬಿಕ್ಕಣ್ಣವರ, ಜಿಪಂ ಸದಸ್ಯೆ ರಾಧಾ ಕಾದ್ರೋಳ್ಳಿ, ತಾಪಂ ಸದಸ್ಯ ಮಹಾದೇವ ಹಿತ್ತಲಮನಿ, ಬಸವರಾಜ ಹೋಳಿ, ಸಂಜೀವ ಲೋಕಾಪೂರ, ಜಗದೀಶ ಘಟ್ನಟಿ, ಬಾಬು ವಳಸಂಗ, ಮಹೇಶ ಶೆಟ್ಟರ, ಕಾಶಿಮ್ ನೇಸರಗಿ, ಮಡಿವಾಳಪ್ಪ ಕೊಟಗಿ, ಪಕ್ಕಿರಪ್ಪ ಜಾಂಗಟಿ, ಚಂದ್ರು ಮಾಳಗಿ, ಅದೃಶ್ಯ ಕೊಟಬಾಗಿ, ಸಲಿಂ ಮೊಖಾಶಿ, ಸತೀಶ ವಳಸಂಗ, ಪ್ರವೀಣಗೌಡ ಪಾಟೀಲ, ರಾಜಶೇಖರ ಇನಾಮದಾರ, ರಾಜೇಂದ್ರ ಇನಾಮದಾರ, ಅಬ್ದುಲ್ ಗಡಕಾರಿ, ಅನೀಲ ಎಮ್ಮಿ, ಆಂಜನೇಯ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button