Kannada NewsKarnataka NewsLatest

Updated News – ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ: ಪರಸ್ಪರ ದೂರು ದಾಖಲು; ಸಂಶಯಾಸ್ಪದ ಪ್ರಕರಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ  ಮಹಿಳೆಯರ ಮೇಲೆ ಮಾನಂಭಂಗ ಯತ್ನ, ರಿವಾಲ್ವರ್ ಹಿಡಿದು ಜೀವಬೆದರಿಕೆ, ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲಾಗಿದೆ.

ಆದರೆ, ಇಡೀ ಪ್ರಕರಣ ಸಂಶಯಾಸ್ಪದವಾಗಿದ್ದು ಪರಸ್ಪರರ ವಿರುದ್ಧ ದೂರು ದಾಖಲಾಗಿದೆ.

ಹುಕ್ಕೇರಿ ಸಿಪಿಐ ಕಲ್ಯಾಣ ಶೆಟ್ಟಿ ಆರೋಪಗಳಿಗೆ ಒಳಗಾಗಿದ್ದು, ಅವರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಶಹಾಪುರದ ಅಲ್ವಾನ್ ಗಲ್ಲಿ ನಿವಾಸಿ 34 ವರ್ಷದ ಪ್ರಿಯಾಂಕಾ ಕೋಂ.ಸುನೀಲ ಕುರಣಕರ್ ಎನ್ನುವವರು ದೂರು ದಾಖಲಿಸಿದ್ದಾರೆ.

“ಅ.13ರಂದು ರಾತ್ರಿ 11.15ರ ಹೊತ್ತಿಗೆ ತಾವು ಸಂಬಂಧಿಕರ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಖಾನಾಪುರ ತಾಲೂಕಿನ ಕುಸಮಳಿಯ ರೆಸಾರ್ಟ್ ನಿಂದ ಹಿಂತಿರುಗುತ್ತಿದ್ದೆವು. ಈ ವೇಳೆ, ಅಲ್ಲಿನ ರಸ್ತೆಯ ಅವ್ಯವಸ್ಥೆಯಿಂದಾಗಿ ನಾವು ಪ್ರಯಾಣಿಸುತ್ತಿದ್ದ ಇನೋವಾ ಕಾರು ಮುಂದಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಾವು ಅವರ ಬಳಿ ಕ್ಷಮೆ ಕೇಳಿ, ಕಾರಿನ ದುರಸ್ತಿ ವೆಚ್ಚ ಭರಿಸುವುದಾಗಿ ತಿಳಿಸಿದೆವು.

ಮಾತುಕತೆ ಮುಂದುವರಿಯುತ್ತಿದ್ದಾಗಲೇ ಅಲ್ಲಿಗೆ ಬಂದ ಹುಕ್ಕೇರಿ ಸಿಪಿಐ ಕಲ್ಯಾಣ ಶೆಟ್ಟಿ ಮತ್ತು ಇತರ 4 -5 ಜನರು ರಿವಾಲ್ವರ್ ತೋರಿಸಿ ನಮಗೆ ಜೀವ ಬೆದರಿಕೆ ಹಾಕಿದರು. ನಮ್ಮ ಜೊತೆಗಿದ್ದ ನನ್ನ ಪತಿ ಮತ್ತು ಸಂಬಂಧಿಕರಿಗೆಲ್ಲ ಮನಬಂದಂತೆ ಥಳಿಸಿದರು. ನಾನು ಸೇರಿದಂತೆ ಜೊತೆಗಿದ್ದ ಕೆಲವು ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದರು. ನಿಮ್ಮೆಲ್ಲರ ಮೇಲೆ ಅತ್ಯಾಚಾರ ಮಾಡಿ ತೆಗ್ಗಿನಲ್ಲಿ ಹಾಕಿಹೊಗುತ್ತೇನೆ. ನಾನು ಬೆಳಗಾವಿಯ ಡಾನ್. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಯಾರಿಗಾದರೂ ತಿಳಿಸಿದರೆ ನಿಮ್ಮನ್ನು ಮುಗಿಸಿಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದರು” ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎದುರುದಾರರ ದೂರು

ಆದರೆ, ಕಲ್ಯಾಣ ಶೆಟ್ಟಿ ಮತ್ತು ಕುಟುಂಬ ಸಹ ದೂರು ದಾಖಲಿಸಿದೆ. ಕಲ್ಯಾಣ ಶೆಟ್ಟಿ ಕುಟುಂಬ ಸಹ  ಒಂದು ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು 2 ವಾಹನಗಳಲ್ಲಿ ಬರುತ್ತಿತ್ತು. ಕಲ್ಯಾಣ ಶೆಟ್ಟಿ ಕಾರು ಮುಂದೆ ಹೊಗಿತ್ತು. ಹಿಂದಿನಿಂದ ಅವರ ತಾಯಿ ಮತ್ತಿತರರು ಬರುತ್ತಿದ್ದರು. ಆ ಕಾರಿಗೆ ಪ್ರಿಯಾಂಕಾ ಎನ್ನುವವರು ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದವರು 12 -15 ಜನರಿದ್ದರು. ಕಲ್ಯಾಣ ಶೆಟ್ಟಿ ಕುುಟಂಬದವರು ಕೇವಲ 5 ಜನರಿದ್ದರು. ತಾವೇ ಡಿಕ್ಕಿ ಹೊಡೆದು ಕಾರಿಗೆ ಕಲ್ಲು ತೂರಿ, ಹಲ್ಲೆ ನಡೆಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಕಲ್ಯಾಣ ಶೆಟ್ಟಿ ವಾಪಸ್ ಬಂದಿದ್ದಾರೆ. ಆದರೆ ಕಲ್ಯಾಣ ಶೆಟ್ಟಿ ಬಳಿ ರಿವಾಲ್ವರಿ ಇರಲಿಲ್ಲ. ಅವರು ರಜೆಯ ಮೇಲಿದ್ದರು, ಪೊಲೀಸ್ ಡ್ರೆಸ್ ನಲ್ಲಿರಲಿಲ್ಲ. ಅವರ ತಾಯಿ ಮತ್ತು ಕುಟುಂಬದ ಮೇಲೆ ಹಲ್ಲೆ ನಡೆಸಿ, ಕಾರಿಗೆ ಕಲ್ಲು ತೂರಿದ್ದರಿಂದ ಕಲ್ಯಾಣ ಶೆಟ್ಟಿ ಅವರನ್ನು ಥಳಿಸಿದ್ದಾರೆ.

ಇಷ್ಟೊಂದು ದೊಡ್ಡ ಗುಂಪು ಇರುವಾಗ ಮಾನಭಂಗ ಯತ್ನ ನಡೆಸಿದರೆನ್ನುವುದನ್ನು ನಂಬುವುದಕ್ಕೆ ಸಾಧ್ಯವೇ ಎನ್ನುವುದು ಕಲ್ಯಾಣ ಶೆಟ್ಟಿ ಪರವಾಗಿರುವವರ ಪ್ರಶ್ನೆ.

ಇಡೀ ಪ್ರಕರಣ ಸಂಶಯಾಸ್ಪದವಾಗಿದೆ. ಈ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ ಅವರನ್ನು ಪ್ರಗತಿವಾಹಿನಿ ಸಂಪರ್ಕಿಸಿದಾಗ, ತನಿಖೆ ನಡೆದ ನಂತರ ನಿಜಾಂಶ ಹೊರಬರಲಿದೆ. ಆದರೆ ಮೇಲ್ನೋಟಕ್ಕೆ ಕಲ್ಯಾಣ ಶೆಟ್ಟಿ ವಿರುದ್ಧದ ದೂರಿನಲ್ಲಿ ಸತ್ಯಾಂಶ ಇರುವಂತೆ ಕಾಣಿಸುತ್ತಿಲ್ಲ ಎಂದಿದ್ದಾರೆ.

ಈ ಪ್ರಕರಣದಲ್ಲಿ ರಾಜಕಾರಣಿಯೊಬ್ಬರು ಮಧ್ಯಪ್ರವೇಶಿಸಿದ್ದು, ಅವರ ಒತ್ತಡದಿಂದಾಗಿ ಕಲ್ಯಾಣ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಅದರಲ್ಲಿ ಸತ್ಯಾಂಶವಿಲ್ಲ. ಮಹಿಳೆ ನೀಡಿದ ದೂರಿನಲ್ಲಿರುವ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ ಎಂದು ಮೂಲಗಳು ಹೇಳಿವೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button