Belagavi NewsBelgaum NewsKannada NewsKarnataka NewsLatest

*ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 30 ವರ್ಷಗಳ ಕಠಿಣ ಶಿಕ್ಷೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಸಂಕೇಶ್ವರದ ಶಂಕರನಗರದ ದರ್ಶನ ಭಗವಂತ ಹುಣಶ್ಯಾಳ ಎಂಬುವನೇ ಶಿಕ್ಷೆಗೊಳಗಾದ ಆರೋಪಿ. ಅಪ್ರಾಪ್ತ ವಯಸ್ಸಿನ ಸಂತ್ರಸ್ತ ಬಾಲಕಿಯ ಜತೆ ಪ್ರೀತಿಯನ್ನು ತೋರಿ, 2024 ಆಗಸ್ಟ್ 24 ರಂದು ಅಪ್ರಾಪ್ತ ವಯಸ್ಸಿನ ಬಾಲಕಿ ಕಾಲೇಜು ಮುಗಿಸಿ ಮನೆಗೆ ಮರಳುವ ವೇಳೆ ನಿಡಸೋಸಿ ರಸ್ತೆಯಲ್ಲಿ ಆಕೆಯನ್ನು ತಡೆದು ಓಡಿ ಹೋಗುವ ಸಂಚು ರೂಪಿಸಿ ಆ.೨೭ರಂದು ರಾತ್ರಿ ಬಾಲಕಿಯನ್ನು ತನ್ನ ಬೈಕಿನಲ್ಲಿ ಕರೆದೊಯ್ದು ಅಥಣಿಯಲ್ಲಿ ಬಾಡಿಗೆ ಮನೆಯನ್ನು ತೆಗೆದುಕೊಂಡು ತಾವಿಬ್ಬರೂ ದಂಪತಿ ಎಂದು ಮನೆ ಮಾಲೀಕರಿಗೆ ಹೇಳಿ ನಂಬಿಸಿದ್ದಾರೆ. ನಂತರ ಬಾಲಕಿಗೆ ಮನಸಿಲ್ಲದಿದ್ದರೂ ಒತ್ತಾಯದ ಮೂಲಕ ಬಾಡಿಗೆ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

 ನಂತರ ಬೆದರಿಸಿ ಈ ಬಗ್ಗೆ ಯಾರಿಗೂ ಹೇಳಬೇಡ. ನೀನೇ ನನ್ನನ್ನು ಒತ್ತಾಯಿಸಿ ಇಲ್ಲಿಗೆ ಕರೆತಂದಿದ್ದಾಗಿ ಹೇಳಬೇಕು ಎಂದು ಒತ್ತಾಯಿಸಿದ್ದಾನೆ.

ಅತ್ತ ಮಗಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ದರ್ಶನ ಹಾಗೂ ಬಾಲಕಿಯನ್ನು ಅಥಣಿಯಲ್ಲಿ ಪತ್ತೆ ಹಚ್ಚಿ ಕರೆತಂದಿದ್ದಾರೆ. ಅಂದಿನ ತನಿಖಾಧಿಕಾರಿ ಕೆ.ಬಿ ಕಂಠಿ ಪ್ರಕರಣ ದಾಖಲಿಸಿದ್ದರು. ಸಂಕೇಶ್ವರ ಪಿಐ ಆರ್. ಎಸ್ ಖೋತ ಮತ್ತು ಎಸ್. ಎಂ ಆವೂಜಿ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೊಕ್ಸೋ ನ್ಯಾಯಾಲಯ-01  ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ನ್ಯಾಯಾಧೀಶರಾದ ಸಿ, ಎಮ್.  ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 8 ಸಾಕ್ಷಿಗಳ ವಿಚಾರಣೆ ಹಾಗೂ 50 ದಾಖಲೆಗಳು, ಹಾಗೂ 6 ಮುದ್ದೆಮಾಲುಗಳ ಆಧಾರದ ಮೇಲೆ  ಆರೋಪಿ ದರ್ಶನ ಭಗವಂತ ಹುಣಶ್ಯಾಳ (23) ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದರು.

ಆರೋಪಿತನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಬಿ.ಎನ್,ಎಸ್ ಕಾಯ್ದೆ  ಕಲಂ 137 ರಡಿ 7 ವರ್ಷಗಳ ಕಾರಾಗೃಹ ಶಿಕ್ಷೆ, ರೂ 25000 ದಂಡ ವಿಧಿಸಿ ಪ್ರಕರಣದ ತೀರ್ಪು ನೀಡಿದ್ದಾರೆ.  ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷ ರೂ. ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದ್ದು, ಪರಿಹಾರ ಧನವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 5 ವರ್ಷಗಳವರೆಗೆ ಠೇವಣಿ ಇಡುವಂತೆ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಲ್. ವಿ ಪಾಟೀಲರು ಹಾಜರಾಗಿ ವಾದ ಮಂಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button