ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ನಡೆದ ಐಟಿ ದಾಳಿಯಲ್ಲಿ ಅಧಿಕಾರಿಗಳು ಮನೆಯಲ್ಲಿದ್ದ 25 ಲಕ್ಷ ರೂಪಾಯಿ ಕ್ಯಾಶ್ ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ರಶ್ಮಿಕಾ ಮನೆಯಲ್ಲಿ 3.94 ಕೋಟಿ ರೂ. ಮೊತ್ತದ ಅಘೋಷಿತ ಆದಾಯ ಪತ್ತೆಯಾಗಿದೆ. 1.5 ಕೋಟಿ ರೂಪಾಯಿಗೆ ತೆರಿಗೆ ಕಟ್ಟಿಲ್ಲ. ಇಷ್ಟು ಮಾತ್ರವಲ್ಲದೆ ರಶ್ಮಿಕಾ ಹೆಸರಲ್ಲಿ ಎರಡು ಪ್ಯಾನ್ ಕಾರ್ಡ್ ಇರುವುದು ಕೂಡ ಬೆಳಕಿಗೆ ಬಂದಿದೆ. ಒಂದು ಪ್ಯಾನ್ ಕಾರ್ಡ್ ಮೂಲಕ 2016-17ರವರೆಗಷ್ಟೇ ಆದಾಯ ತೆರಿಗೆ ಸಲ್ಲಿಕೆ ಮಾಡಲಾಗಿದೆ. ರಶ್ಮಿಕಾ ತಂದೆ ಒಡೆತನದ ಕಲ್ಯಾಣ ಮಂಟಪದ ಬಗ್ಗೆಯೂ ಗುಮಾನಿಯಿದ್ದು, ಕಲ್ಯಾಣ ಮಂಟಪದ ವ್ಯವಹಾರದ ಬಗ್ಗೆಯೂ ಕೆಲ ಮಾಹಿತಿ ಮುಚ್ಚಿಟ್ಟ ಆರೋಪ ಕೇಳಿ ಬಂದಿದೆ.
ಗುರುವಾರ ಮುಂಜಾನೆ 7:30ಕ್ಕೆ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿನಾ ರಶ್ಮಿಕಾ ಮಾನೆಗೆ ಆಂಧ್ರಪ್ರದೇಶದ ಐಟಿ ಅಧಿಕಾರಿಗಳು ದಾಳಿ ನಡೆಸಿ, ಮನೆಯನ್ನು ಜಾಲಾಡಿ ದಾಖಲೆಗಳನ್ನು ಕಲೆಹಾಕಿದ್ದರು. ರಶ್ಮಿಕಾ ಮಂದಣ್ಣ ತಂದೆ ಒಡೆತನದ ಬೃಹತ್ ಬಂಗಲೆ, ಸೆರೆನಿಟಿ ಕಲ್ಯಾಣ ಮಂಟಪ, ಕಾಫಿ ತೋಟ, ಹೊಸದಾಗಿ ಖರೀದಿ ಮಾಡಿ ಬಿಟ್ಟಂಗಾಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ಪೆಟ್ರೋಲ್ ಬಂಕ್ ಜಾಗದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು.
ಈ ಮಧ್ಯೆ ಗುರುವಾರ ಮಧ್ಯಾಹ್ನ ಐಟಿ ಅಧಿಕಾರಿಗಳ ತಂಡ ರಶ್ಮಿಕಾ ಮಂದಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಹೈದರಾಬಾದ್ ನಲ್ಲಿ ಶೂಟಿಂಗ್‍ನಲ್ಲಿ ನಿರತರಾಗಿದ್ದ ರಶ್ಮಿಕಾ ಮಂದಣ್ಣ ವಿಮಾನದಲ್ಲಿ ಮೈಸೂರಿಗೆ ಬಂದು ಬಳಿಕ ಕಾರಿನಲ್ಲಿ ಗುರುವಾರ ರಾತ್ರಿಯೇ ಮನೆಗೆ ಧಾವಿಸಿದ್ದರು. ಮನೆಗೆ ಬಂದ ರಶ್ಮಿಕಾರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ಸತತ 29 ಗಂಟೆಗಳ ಬಳಿಕ ಐಟಿ ಅಧಿಕಾರಿಗಳ ತಲಾಶ್ ಬಳಿಕ 1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ ನಲ್ಲಿ ಮಂದಣ್ಣ ಮನೆಯಲ್ಲಿ ಸಿಕ್ಕ ದಾಖಲೆಯನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ