*26 ವರ್ಷಗಳ ಬಳಿಕ ತಾಯಿಯ ಮನೆಗೆ ಬಂದ ರವಿ ಪೂಜಾರಿ*: *ತಾಯಿಯ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತ ಪಾತಕಿ*

ಪ್ರಗತಿವಾಹಿನಿ ಸುದ್ದಿ: ಭೂಗತ ಜಗತ್ತಿನಲ್ಲಿ ಕುಖ್ಯಾತಿ ಗಳಿಸಿದ್ದ ರವಿ ಪೂಜಾರಿ ಬರೋಬ್ಬರಿ 26 ವರ್ಷಗಳ ಬಳಿಕ ಹುಟ್ಟೂರಿಗೆ ಮರಳಿದ್ದಾರೆ. ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಕರೆತರಲಾಗಿದೆ. ತಾಯಿಯ ಮೃತದೇಹ ಕಂಡ ತಕ್ಷಣ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರವಿ ಪೂಜಾರಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ ಗುರುವಾರ ರಾತ್ರಿ ನಿಧನರಾಗಿದ್ದರು. ಮಲ್ಪೆ ಸಮೀಪದ ನೆರ್ಗಿಯ ಹಿರಿಯರ ಮನೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ತಾಯಿಯ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ರವಿ ಪೂಜಾರಿಗೆ ರಾಜ್ಯ ಹೈಕೋರ್ಟ್ ಅನುಮತಿ ನೀಡಿತ್ತು.
ತಮ್ಮ ಹುಟ್ಟೂರಿನ ಮನೆಗೆ ಬಂದ ರವಿ ಪೂಜಾರಿ ತಾಯಿಯ ಮೃತದೇಹದ ಮುಂದೆ ಕುಳಿತು ಕಣ್ಣೀರಿಟ್ಟಿದ್ದಾರೆ. ಬಳಿಕ ಅಂತ್ಯಕ್ರಿಯೆಯ ವಿಧಿವಿಧಾನಗಳಿಗೆ ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು ಕಾರಾಗೃಹ ಇಲಾಖೆಯ ಪೊಲೀಸರ ಸರ್ಪಗಾವಲಿನಲ್ಲಿ ರವಿ ಪೂಜಾರಿಯನ್ನು ಉಡುಪಿಗೆ ಕರೆತರಲಾಗಿದೆ. ಉಡುಪಿಯಲ್ಲಿಯೂ ಸ್ಥಳೀಯ ಪೊಲೀಸರು ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ. ಈ ಕುರಿತು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ಅಂತ್ಯಕ್ರಿಯೆ ಮುಗಿದ ತಕ್ಷಣ ರವಿ ಪೂಜಾರಿಯನ್ನು ಮತ್ತೆ ಜೈಲಿಗೆ ಕರೆದೊಯ್ಯುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಆತನನ್ನು ಕರೆತರುವ ಮತ್ತು ಭದ್ರತೆ ಒದಗಿಸುವ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆಯ ಸಂಪೂರ್ಣ ವೆಚ್ಚವನ್ನು ರವಿ ಪೂಜಾರಿಯೇ ಭರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಭೂಗತ ಪಾತಕಿ ಛೋಟಾ ರಾಜನ್‌ನ ಸಹಚರನಾಗಿದ್ದ ರವಿ ಪೂಜಾರಿ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ ಹಾಗೂ ಹಪ್ತಾ ವಸೂಲಿ ಸೇರಿದಂತೆ 90ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ. ಸುಮಾರು 26 ವರ್ಷಗಳ ಕಾಲ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿ ಭಾರತಕ್ಕೆ ಕರೆತಂದಿದ್ದರು.
ಬಂಧನದ ಬಳಿಕ ಆತನ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಕಳೆದ ಆರು ವರ್ಷಗಳಿಂದ ಬೆಂಗಳೂರಿನ ಜೈಲಿನಲ್ಲಿದ್ದಾನೆ.
ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಕಲ್ಮಾಡಿ ಬಪ್ಪುತೋಟದಲ್ಲಿ ಜನಿಸಿದ ರವಿ ಪೂಜಾರಿ ಬಾಲ್ಯವನ್ನು ಮಲ್ಪೆಯಲ್ಲೇ ಕಳೆದಿದ್ದ. ಆಂಗ್ಲ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣನಾಗಿದ್ದ ರವಿ ಪೂಜಾರಿ 1980ರ ದಶಕದಲ್ಲಿ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ ಎಂದು ವರದಿಯಾಗಿದೆ.
ತಂದೆ ಸೂರ್ಯ ಪೂಜಾರಿ ಮುಂಬೈಯ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ರವಿ ಪೂಜಾರಿಗೆ ಪತ್ನಿ ಪದ್ಮಾ ಪೂಜಾರಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ.
1992-93ರಲ್ಲಿ ಸಹೋದರಿಯ ಮದುವೆಗೆ ಬಂದಿದ್ದೇ ಕೊನೆಯಾಗಿತ್ತು. ಆ ಬಳಿಕ ಹುಟ್ಟೂರಿನ ನಂಟು ಕಡಿದುಕೊಂಡಿದ್ದ ರವಿ ಪೂಜಾರಿ, ಇದೀಗ ತಾಯಿಯ ಅಂತಿಮ ದರ್ಶನಕ್ಕಾಗಿ ಮತ್ತೆ ಮಲ್ಪೆಗೆ ಮರಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



