*ಮನೆಯಲ್ಲಿ ಮಲಗಿದ್ದ ಯುವಕ ಶವವಾಗಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಗನನ್ನೇ ಬರ್ಬರವಾಗಿ ಕೊಲೆಗೈದ ತಾಯಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಯಭಾಗದ ನಾವಿಗಲ್ಲಿ ಮನೆಯಲ್ಲಿ ಮಲಗಿದ್ದ ಯುವಕ ಶವವಾಗಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹೆತ್ತ ತಾಯಿಯೇ ಮಗನನ್ನು ಬರ್ಬರವಾಗಿ ಹತ್ಯೆಗಿದಿರುವುದು ತನಿಖೆಯಿಂದ ಬಯಲಾಗಿದೆ.
ಪ್ರಕರಣ ಸಂಬಂಧ ಓರ್ವ ಬಾಲಕ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.
23 ವರ್ಷದ ಯುವಕ ಹರಿಪ್ರಸಾದ್ ರಾಯಭಾಗದ ನಾವಿಗಲ್ಲಿಯಲ್ಲಿ ತನ್ನ ಮನೆಯಲ್ಲಿ ಮೇ 29ರಂದು ಮಲಗಿದ್ದ ರೀತಿಯಲ್ಲೇ ಶವವಾಗಿ ಪತ್ತೆಯಾಗಿದ್ದ. ರಾತ್ರಿ ಮನೆಯಲ್ಲಿ ಮಲಗಿದ್ದ ಯುವಕ ಇದ್ದಕ್ಕಿದ್ದಂತೆ ಮೃತಪಟ್ಟಿದ್ದ ಎನ್ನಲಾಗಿತ್ತು. ಆದರೆ ಯುವಕನ ಸಾವಿನ ಬಗ್ಗೆ ಆತನ ತಂದೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಾಯಭಾಗದ ಇನ್ಸ್ ಪೆಕ್ಟರ್ ಹೆಚ್.ಟಿ.ಮುಲ್ಲಾ ನೇತೃತ್ವದಲ್ಲಿ ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿತ್ತು. ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಮೃತ ಯುವಕ ಹರಿಪ್ರಸಾದ್ ತನ್ನ ತಾಯಿ ಹಾಗೂ ತಮ್ಮನ ಜೊತೆ ನಾವಿಗಲ್ಲಿ ಮನೆಯಲ್ಲಿ ವಾಸವಾಗಿದ್ದ. ಹರಿಪ್ರಸಾದ್ ತಂದೆ ಕುಡುಚಿಯಲ್ಲಿ ಸಹೋದರನ ಜೊತೆ ವಾಸವಾಗಿದ್ದರು. ಮೇ 29ರ ಮುಂಜಾನೆ ಯುವಕ ಮಲಗಿದ್ದ ರೀತಿಯಲ್ಲಿ ಶವಾಗಿ ಪತ್ತೆಯಾಗಿದ್ದ. ಯುವಕನ ಕತ್ತು, ಭುಜದಲ್ಲಿ ಗಾಯದ ಗುರುತು ಪತ್ತೆಯಾಗಿತ್ತು. ತನಿಖೆ ವೇಳೆ ತಾಯಿಯೇ ಹತ್ಯೆಯ ಪ್ರಮುಖ ಆರೋಪಿ ಎಂಬುದು ತಿಳಿದುಬಂದಿದೆ.
ಬಾಲಕ ಸೇರಿ 7 ಜನರು ಕೃತ್ಯದಲ್ಲಿ ಭಾಗಿಯಾಗಿದ್ದು, ಇವರಲ್ಲಿ ಮೂರನ್ನು ಬಂಧಿಸಿದ್ದು, ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ. ಮೃತ ಯುವಕ ಸದಾ ತನ್ನ ತಾಯಿಯೊಂದಿಗೆ ಜಗಳವಾಡುತ್ತಿದ್ದ. ಅಲ್ಲದೇ , ತಮ್ಮನೊಂದಿಗೂ ಗಲಾಟೆ ಮಾಡಿಕೊಂಡಿದ್ದ. ಇದೇ ಕಾರಣಕ್ಕಾಗಿ ತಾಯಿಯೇ ತನ್ನ ತಂಗಿ, ತಂಗಿಯ ಮಗ ಇನ್ನಿತರರ ಜೊತೆ ಸೇರಿ ಮಗನ ಹತ್ಯೆಗೆ ಷಡ್ಯಂತ್ರ ನಡೆಸಿ, ಮೇ 28ರ ರಾತ್ರಿ ಮಗನ ಕತ್ತು ಹಿಸುಕಿ ಕೊಲೆ ಮಾಡಿರುವುದು ಬಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ