Latest

ಆ ವೈದ್ಯ 12 ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕಿದ್ದೇಕೆ? ನಿಮ್ಮ ಎದೆ ಗುಂಡಿಗೆ ಗಟ್ಟಿ ಇದ್ದರೆ ಮಾತ್ರ ಇದನ್ನು ಓದಿ…

ಅದೇಕೋ ಮಹಿಳೆಯೊಬ್ಬರಿಗೆ ಅನುಮಾನ ಬರಲಾರಂಭಿಸಿತು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಈ ಸುದ್ದಿ ಓದುವಾಗ ಎದೆ ಗುಂಡಿಗೆಯನ್ನೊಮ್ಮೆ ಪರೀಕ್ಷಿಸಿಕೊಳ್ಳಿ. ನೀವು ದುರ್ಬಲ ಹೃದಯದವರಾಗಿದ್ದರೆ ಓದುವ ಸಾಹಸ ಮಾಡಬೇಡಿ.

ಇದು ಹೈದರಾಬಾದ್ ನಲ್ಲಿ ನಡೆದಿರುವ ಘಟನೆ.  ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಮಂಜುಳಾ ಮಾನಸ  ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ.

ಭಾಷಣಕಾರರೊಬ್ಬರು (ಮಂಜುಳಾ ಮಾನಸಾ ಪ್ರಕಾರ ವಿವಿಯ ಅಂದಿನ ಕುಲಪತಿ) ಈ ವಿಷಯವನ್ನು ಬಹಿರಂಗ ಸಭೆಯಲ್ಲೇ ಹೇಳ್ಳಿದ್ದರಂತೆ.

ಹೈದರಾಬಾದ್ -ಕರ್ನಾಟಕ ಗಡಿ ಭಾಗದ ಹಳ್ಳಿಯೊಂದರಲ್ಲಿ ವಾಸಿಸುವ ವೈದ್ಯರೊಬ್ಬರು ಸರಕಾರಿ ನೌಕರಿಯಲ್ಲಿದ್ದುಕೊಂಡು ಖಾಸಗಿಯಾಗಿ ನರ್ಸಿಂಗ್ ಹೋಮ್ ನಡೆಸುತ್ತಿದ್ದರು. ತಮ್ಮ ಮನೆಯಲ್ಲೇ ಈ ನರ್ಸಿಂಗ್ ಹೋಮ್ ಇಟ್ಟುಕೊಂಡಿದ್ದರು.. ಖಾಸಗಿ ಪ್ರ್ಯಾಕ್ಟೀಸ್ ಮಾಡುತ್ತಿರುವುದರಿಂದ ಅವರನ್ನು ನೌಕರಿಯಿಂದ ತೆಗೆದು ಹಾಕಲಾಗಿತ್ತು.

ದೊಡ್ಡದಾದ ಮನೆ ಹೊಂದಿದ್ದ  ಅವರು ಬೇಸ್ ಮೆಂಟ್ ನಲ್ಲಿ 12 ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕಿದ್ದರು. ಎಲ್ಲರೂ ಇದನ್ನು ನೋಡಿ ವೈದ್ಯರು ಪ್ರಾಣಿಪ್ರಿಯರು ಅಂದುಕೊಂಡಿದ್ದರು. ಅಕ್ಕಪಕ್ಕದವರೆಲ್ಲ ಪ್ರಾಣಿ ಪ್ರೀತಿಗಾಗಿ ಅವರನ್ನು ಹಾಡಿಹೊಗಳುತ್ತಿದ್ದರು.

ಮಹಿಳೆ ಮಾಡಿದ್ದೇನು?

ಆದರೆ ಅದೇಕೋ ಮಹಿಳೆಯೊಬ್ಬರಿಗೆ ಅನುಮಾನ ಬರಲಾರಂಭಿಸಿತು. ಅವರು ಉಪಾಯ ಮಾಡಿ ಮಗನ ನೆರವು ಪಡೆದು ವೈದ್ಯರ ಮನೆಯ ಬೇಸ್ ಮೆಂಟ್ ನಲ್ಲಿ ಕ್ಯಾಮೆರಾ ಒಂದನ್ನು ಅಳವಡಿಸಿದರು. ಈ ಕ್ಯಾಮರಾದಲ್ಲಿ ರೆಕಾರ್ಡ್ ಆದ ದೃಷ್ಯಗಳನ್ನು ನೋಡಿ ಮಹಿಳೆಗೆ ಹಾರ್ಟ್ ಅಟ್ಯಾಕ್ ಆಗುವುದೊಂದೇ ಬಾಕಿ ಇತ್ತು.

ವೈದ್ಯರು ತಮ್ಮ ನರ್ಸಿಂಗ್ ಹೋಮ್ ನಲ್ಲಿ ಅತ್ಯಾಧುನಿಕ ಸ್ಕ್ಯಾನಿಂಗ್ ಮಷಿನ್ ಇಟ್ಟುಕೊಂಡಿದ್ದರು. ಅದರಲ್ಲಿ ಗರ್ಭಿಣಿಯರ ಪರೀಕ್ಷೆ ನಡೆಸಿ ಹೆಣ್ಣು ಭ್ರೂಣಗಳನ್ನು ತೆಗೆದುಹಾಕುತ್ತಿದ್ದರು.

ಆ ರೀತಿ ತೆಗೆದ ಭ್ರೂಣಗಳನ್ನು ಹೊರಗೆ ಹಾಕುವುದು ಕಷ್ಟ ಎನ್ನುವ ಕಾರಣದಿಂದ ಅವುಗಳನ್ನು ತಿನ್ನಲು ಈ ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕಿದ್ದರು.

ಲಕ್ಷಾಂತರ ರೂ. ಪಡೆದು ಭ್ರೂಣ ತೆಗೆದು ಅವುಗಳನ್ನು ನಾಯಿಗಳಿಗೆ ಆಹಾರವಾಗಿ ಹಾಕುತ್ತಿದ್ದರು. ಎಷ್ಟೋ ಬಾರಿ ಹಣದ ಆಸೆಗಾಗಿ ಗಂಡು ಭ್ರೂಣವಿದ್ದರೂ ಹೆಣ್ಣು ಭ್ರೂಣವೆಂದು ತಪ್ಪು ಮಾಹಿತಿ ನೀಡಿ ತೆಗೆದುಹಾಕುತ್ತಿದ್ದರು ಎನ್ನುವ ಅನುಮಾನವೂ ಇದೆ.

ಈ ವಿಷಯವನ್ನು ಅವರು ಹೇಳಿದ ತಕ್ಷಣ ಮಂಜುಳಾ ಮಾನಸಾ ಅವರು ಹೆಚ್ಚಿನ ವಿವರ ಕೇಳಿದರಂತೆ. ಆ ಊರಿನ ಹೆಸರು, ಅವರ ವಿರುದ್ಧ ದೂರು ದಾಖಲಾಗಿದೆಯೇ ಎನ್ನುವ ಮಾಹಿತಿ ಕೇಳಿದರಂತೆ. ಆದರೆ ಅವರಿಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ.

ನಂತರ ಅದರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿ, ತನಿಖೆಗೆ ಕ್ರಮ ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಅವರ ಅವಧಿ ಮುಗಿದುಹೋಯಿತಂತೆ.

2 ದಿನ ಊಟ ಮಾಡಲಿಲ್ಲ: 

ಈ ಬಗ್ಗೆ #ಪ್ರಗತಿವಾಹಿನಿ ವಿಚಾರಿಸಿದಾಗ, ಘಟನೆಯ ಬಗ್ಗೆ ಕೇಳಿದ ನಂತರ 2 ದಿನ ನಾನು ಊಟ ಮಾಡಲಿಲ್ಲ. ಆದರೆ ನಾನು ಅಧಿಕಾರ ಕಳೆದುಕೊಂಡಿದ್ದರಿಂದ ಮುಂದೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದರು ಮಂಜುಳಾ ಮಾನಸಾ.

ಈ ಘಟನೆ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸರಕಾರದ ಮೇಲೆ ಒತ್ತಡ ಹೇರಲು ಈಗಲೂ  ನಾನು ಸಿದ್ದನಿದ್ದೇನೆ. ತಕ್ಷಣ ಹೆಚ್ಚಿನ ವಿವರ ಸಂಗ್ರಹಿಸಲು ಪ್ರಯತ್ನಿಸುತ್ತೇನೆ. ಎಲ್ಲರೂ ಸೇರಿ ವೈದ್ಯರ ಮೇಲೆ ಕ್ರಮವಾಗುವಂತೆ ಪ್ರಯತ್ನಿಸೋಣ ಎಂದರು.

#ಪ್ರಗತಿವಾಹಿನಿ ಈ ಘಟನೆ ಕುರಿತು ಸಮಗ್ರ ತನಿಖೆಗೆ ಆಗ್ರಹಿಸುತ್ತದೆ. ಇದಕ್ಕೆ ಸಿಬಿಐನಂತಹ ತನಿಖೆ ಅಗತ್ಯವೆನಿಸುತ್ತದೆ. ದಯವಿಟ್ಟು ಮಹಿಳಾ ಸಂಘಟನೆಗಳು, ಸಾರ್ವಜನಿಕರು ಇದಕ್ಕೆ ಕೈ ಜೋಡಿಸಬೇಕು. ಈ ಘಟನೆ ನಡೆದ ಊರನ್ನು ಮೊದಲು ಪತ್ತೆ ಹಚ್ಚಬೇಕು.

ಈ ಸುದ್ದಿಯ ಲಿಂಕ್ ನ್ನು ಆದಷ್ಟು ಹೆಚ್ಚು ಶೇರ್ ಮಾಡಿ. ಪ್ರಕರಣದ ಮಾಹಿತಿ ಸಿಕ್ಕಿದರೆ ಪ್ರಗತಿವಾಹಿನಿಗೆ ತಿಳಿಸಿ. ಆ ಅಮಾನವೀಯ ವೈದ್ಯರಿಗೆ ಕಠಿಣ ಶಿಕ್ಷೆ ಆಗಲೇಬೇಕು.

ಇ ಮೇಲ್ [email protected], ವಾಟ್ಸಪ್  -8197712235, https://pragati.taskdun.com

 

 ಘಟನೆಯ ಬಗ್ಗೆ ಕೇಳಿದ ನಂತರ 2 ದಿನ ನಾನು ಊಟ ಮಾಡಲಿಲ್ಲ

-ಮಂಜುಳಾ ಮಾನಸಾ,

ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button