ಬಂಡಾಯದ ಬಿಸಿ ಮಧ್ಯೆಯೇ ರಂಗೇರುತ್ತಿದೆ ಚುನಾವಣೆ ಕಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಕಣ ಸಿದ್ದವಾಗುತ್ತಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಅಲ್ಲಲ್ಲಿ ಬಂಡಾಯದ ಬಿಸಿ ಎದುರಿಸುತ್ತಿದ್ದರೆ, ಕೆಲವೆಡೆ ಜೆಡಿಎಸ್ ಗೆ ನಂಬಿದ ಅಭ್ಯರ್ಥಿಗಳೇ ಕೈಕೊಟ್ಟಿದ್ದಾರೆ.

ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಗುರುವಾರ ಪಕ್ಷೇತರರು, ಇತರ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಎರಡು ಕಡೆ ಬಿಜೆಪಿಯಿಂದ ಬಂಡಾಯ ಎದ್ದಿದ್ದ ಜೆಡಿಎಸ್ ಅಭ್ಯರ್ಥಿಗಳು ಹಿಂದೆ ಸರಿದಿದ್ದಾರೆ. ಆದರೆ ಅತ್ಯಂತ ಕುತೂಹಲ ಕೆರಳಿಸಿದ್ದ ಗೋಕಾಕ ಮತ್ತು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಮುಂದುವರಿದಿದ್ದಾರೆ.

ಗೋಕಾಕಲ್ಲಿ ಅಶೋಕ ಪೂಜಾರಿ ಮನವೊಲಿಸುವ ಬಿಜೆಪಿಯ ಕಸರತ್ತು ಕೊನೆಯ ಕ್ಷಣದವರೆಗೂ ನಡೆದು ವಿಫಲವಾಯಿತು. ಮಾಜಿ ಸಚಿವ ಉಮೇಶ ಕತ್ತಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವರು ಪ್ರಯತ್ನಿಸಿ ವಿಫಲರಾದರು.

ಅಥಣಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಖುರ್ಚಿಗೆ ಬಿಸಿ ತಂದಿದ್ದ ಗುರಪ್ಪ ದಾಸ್ಯಾಳ ಕೊನೆಗೂ ಕಣದಿಂದ ಹಿಂದೆ ಸರಿದಿದ್ದಾರೆ. ಅಥಣಿಯಲ್ಲಿ ಶಹಜಹಾನ್ ಡೊಂಗರಗಾಂವ್, ಸದಾಶಿವ ಬೂಟಾಳೆ ಸೇರಿ ಒಟ್ಟೂ 8 ಅಭ್ಯರ್ಥಿಗಳು ಕಣದಿಂದ ವಾಪಸ್ ಸರಿದಿದ್ದಾರೆ. ಕಾಗವಾಡದಲ್ಲಿ ಅಮೂಲ್ ಸದಾಶಿವ ಸರಡೆ ಎನ್ನುವವರು ಕಣದಿಂದ ಹಿಂದೆ ಸರಿದಿದ್ದಾರೆ.

ರಾಜ್ಯಾದ್ಯಂತ ಚುನಾವಣೆ ಪ್ರಚಾರ, ಆರೋಪ -ಪ್ರತ್ಯಾರೋಪ ಜೋರಾಗುತ್ತಿದೆ. ಈ ಚುನಾವಣೆ ಅಕ್ರಮಗಳಿಂದ ಮುಕ್ತವಾಗಿ ನಡೆಯುತ್ತದೆ ಎನ್ನುವ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 15ಕ್ಕೆ 15 ಸ್ಥಾನಗಳನ್ನೂ ಗೆಲ್ಲುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಚುನಾವಣೆ ನಂತರ ಈಗಿನ ಅನರ್ಹ ಶಾಸಕರನ್ನು ಮಂತ್ರಿ ಮಾಡ್ತೇವೆ ಎನ್ನುವುದು ಭ್ರಷ್ಟಾಚಾರವಲ್ಲವೇ ಎಂದು ಡಿ.ಕೆ.ಶಿವಕುಮಾರ ಪ್ರಶ್ನಿಸಿದ್ದಾರೆ.

ಹೊಸಕೋಟೆಯಲ್ಲಿ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ ಹೊದಲ್ಲೆಲ್ಲ ತಾವು ಸಿದ್ದರಾಮಯ್ಯಗೆ ಸಾಲ ಕೊಟ್ಟಿದ್ದಾಗಿ ಹೇಳುತ್ತಿದ್ದು, ಈ ವಿಷಯವನ್ನು ನಾಮಪತ್ರ ಸಲ್ಲಿಸುವಾಗ ಮುಚ್ಚಿಟ್ಟಿದ್ದು ಅವರ ನಾಮಪತ್ರ ತಿರಸ್ಕರಿಸಬೇಕೆಂದು ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಚುನಾವಣೆ ಕಣಕ್ಕೆ ಘಟಾನುಘಟಿಗಳು ಇಳಿಯುತ್ತಿದ್ದು, ಮೂರೂ ಪಕ್ಷಗಳು 12- 15 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಳ್ಳುತ್ತಿವೆ. ಸರಕಾರ ಉಳಿಸಿಕೊಳ್ಳುವ ತವಕ ಬಿಜೆಪಿಯದ್ದಾಗಿದ್ದರೆ, ಮೈತ್ರಿ ಸರಕಾರ ಉರುಳಿಸಿದವರನ್ನು ಕೆಡವಲು ಕಾಂಗ್ರೆಸ್-ಜೆಡಿಸ್ ಕಸರತ್ತು ನಡೆಸಿವೆ.

ಇವುಗಳನ್ನೂ ಓದಿ –

ಇಂದು 2ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ ನಿಮ್ಮ ಮಗು ಪ್ರಗತಿವಾಹಿನಿ

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ, ಅಮಿತಾಬ್, ರಜನಿಕಾಂತ್ ಉಪಸ್ಥಿತಿ

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಮಹದಾಯಿ ಹೋರಾಟದ ಬಿಸಿ

ರಸ್ತೆ ಅಪಘಾತಕ್ಕೆ ಯುವ ಪತ್ರಕರ್ತ ಬಲಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button