ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಚುನಾವಣಾ ಆಯೋಗದ ನಿರ್ದೇಶನ ಪ್ರಕಾರ ೦೧-೦೧-೨೦೨೦ ರನ್ನಾಧರಿಸಿ ಭಾವಚಿತ್ರ ಇರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಜ.೬, ೭ ಹಾಗೂ ೮ ರಂದು ಮಿಂಚಿನ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜ.೬) ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಸಮಗ್ರ ಮತದಾರರ ಕರಡು ಮತದಾರರ ಪಟ್ಟಿಯನ್ನು ಡಿ.೧೬, ೨೦೧೯ ರಂದು ಪ್ರಕಟಿಸಲಾಗಿರುತ್ತದೆ.
ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ.೧೬ ರಿಂದ ಜ.೧೫, ೨೦೨೦ ರವರೆಗೆ ಅವಕಾಶವಿರುತ್ತದೆ.
ಹಕ್ಕು ಮತ್ತು ಆಕ್ಷೇಪಣೆಗಳನ್ನು ಜ.೨೭ ರೊಳಗೆ ಮಾಡಲಾಗುತ್ತದೆ; ಅದೇ ರೀತಿ ಫೆ.೪ ರೊಳಗೆ ಪೂರಕ ಪಟ್ಟಿ ಸಿದ್ಧಪಡಿಸುವುದು ಮತ್ತು ಫೆ.೭ ರಂದು ಮತದಾರರ ಅಂತಿಮ ಕರಡು ಪಟ್ಟಿಯನ್ನು ಫೆ.೭ ರಂದು ಪ್ರಕಟಿಸಲಾಗುವುದು.
ಜಿಲ್ಲೆಯಲ್ಲಿ ಈ ಮೂರು ದಿನಗಳ ಅವಧಿಯಲ್ಲಿ ಪ್ರತಿ ಮತಗಟ್ಟೆ ಮಟ್ಟದಲ್ಲಿ ಮಿಂಚಿನ ನೋಂದಣಿ ಅಭಿಯಾನ ನಡೆಸಲಾಗುತ್ತಿದೆ.
ಬಿ.ಎಲ್.ಓ.ಗಳು ಮತ್ತು ಬಿ.ಎಲ್.ಓ. ಮೇಲ್ವಿಚಾರಕರು ಜ.೬ರಿಂದ ೮ ರವರೆಗೆ ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೬ ರವರೆಗೆ ಹಾಜರಿರಲಿದ್ದಾರೆ.
ಎಲ್ಲ ಸಾರ್ವಜನಿಕರು ತಮ್ಮ ಮತದಾರರ ಪಟ್ಟಿಯನ್ನು ತಮ್ಮ ವ್ಯಾಪ್ತಿಯ ಬಿ.ಎಲ್.ಓ. ಇವರ ಬಳಿ ಪರಿಶೀಲಿಸಿಕೊಂಡು ಹೆಸರು ಸೇರ್ಪಡೆ ಮಾಡಬಹುದು.
ಅದೇ ರೀತಿ ಹೆಸರು ಕಡಿಮೆ ಮಾಡಬಹುದು; ವಿಳಾಸ ಬದಲಾವಣೆ ಕುರಿತು ನಿಗದಿತ ನಮೂನೆಯನ್ನು ಪಡೆದು, ಅಲ್ಲಿಯೇ ಭರ್ತಿ ಮಾಡಿ ಸಲ್ಲಿಸಬಹುದು.
ಅರ್ಹತಾ ದಿನಾಂಕ ೦೧-೦೧-೨೦೨೦ ಕ್ಕೆ ೧೮ ವರ್ಷ ತುಂಬಿದ ಮತ್ತು ಮೇಲ್ಪಟ್ಟವರು ತಮ್ಮ ಸಂಬಂಧಿತ ವಿಧಾನಸಭಾ ಮತಕ್ಷೇತ್ರದ ಮತದಾರರು ಹೆಸರು ಸೇರ್ಪಡೆಗೆ ನಮೂನೆ ೬ ಹಾಗೂ ಹೆಸರು ಕೈಬಿಡಲು/ಕಡಿಮೆಗೊಳಿಸಲು ನಮೂನೆ ೭; ತಪ್ಪುಗಳ ತಿದ್ದುಪಡಿಗೆ ನಮೂನೆ ೮ ಹಾಗೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಳಗೆ ವಿಳಾಸ ಬದಲಾವಣೆಗೆ ನಮೂನೆ ೮ ಎ ರಲ್ಲಿ ಅರ್ಜಿ ಸಲ್ಲಿಸಬಹುದು.
ಈಗಾಗಲೇ ನಮೂದು ಇರುವ ಅರ್ಹ ಮತದಾರರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು, ಸಾರ್ವಜನಿಕರು ಮತದಾರರ ಪಟ್ಟಿಯ ಪರಿಷ್ಕರಣೆಯ ಮಿಂಚಿನ ನೋಂದಣಿ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಚುನಾವಣಾ ತಹಶೀಲ್ದಾರ ಎನ್.ಬಿ.ಪಾಟೀಲ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ