*ಸಿಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ*
ಪ್ರಗತಿವಾಹಿನಿ ಸುದ್ದಿ : ಸಚಿವೆ ಲಕ್ಷ್ಮಿ ಹೆಬ್ಬಾಳರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಬಂಧಿತರಾಗಿರುವ ಬಿಜೆಪಿಯ ಎಂಎಲ್‌ಸಿ ಸಿ.ಟಿ. ರವಿ ಅವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶಿಸಿದೆ.
ಪ್ರಕರಣ ರದ್ದುಗೊಳಿಸಬೇಕು ಹಾಗೂ ಕೇಸ್ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿರುವ ಕುರಿತು ಹೈಕೋರ್ಟ್ ನ್ಯಾಎಂ.ಜಿ ಉಮಾ ಅವರ ಏಕಸದಸ್ಯ ಪೀಠದಿಂದ ವಿಚಾರಣೆ ನಡೆದಿದೆ.
ರವಿ ಅವರ ಪರವಾಗಿ ವಾದಿಸಿರುವ ಹಿರಿಯ ವಕೀಲ ಸಂದೇಶ್ ಚೌಟ ಅವರು, ರವಿ ಅವರನ್ನು ಬಂಧಿಸಿರುವುದೇ ಅಕ್ರಮವಾಗಿದೆ. ನಮ್ಮ ಕಕ್ಷಿದಾರರಿಗೆ ಬಂಧನದ ಕುರಿತು ಯಾವುದೇ ನೋಟಿಸ್ ಸಹ ನೀಡಿಲ್ಲ. ತಕ್ಷಣ ರವಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಕೋರಿದರು.
ಸರ್ಕಾರದ ಪರ ಪ್ರತಿವಾದಿಸಿದ ಎಸ್‌ಪಿಪಿ ಬಿ.ಎ. ಬೆಳ್ಳಿಯಪ್ಪ ಅವರು, ರವಿ ಅವರ ಜಾಮೀನು ಅರ್ಜಿ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಇದೆ. ಈ ಅರ್ಜಿಯನ್ನು ಪರಿಗಣಿಸಬಾರದು. ಬಂಧನ ಅಕ್ರಮವಾಗಿದ್ದರೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಬಹುದು. ರವಿ ಅವರು ಟ್ರಾನ್ಸಿಟ್ ರಿಮ್ಯಾಂಡ್‌ನಲ್ಲಿದ್ದಾರೆ. ಅವರು ಕೆಲವು ಆಕ್ಷೇಪಾರ್ಹವಾದ ಮಾತುಗಳನ್ನು ಆಡಿದ್ದಾರೆ. ಪೊಲೀಸ್ ಕಷ್ಟಡಿಯಲ್ಲಿ ರವಿ ಅವರು ಸ್ವತಂತ್ರ ಹೋರಾಟಗಾರರಂತೆ ನಡೆದುಕೊಂಡಿದ್ದಾರೆ. ಪೊಲೀಸರ ವಿಚಾರಣೆಗೆ ಸಹಕರಿಸಿಲ್ಲ ಎಂದು ವಾದಿಸಿದರು.
ಇದೇ ವೇಳೆ ರವಿ ಅವರನ್ನು ವಶಕ್ಕೆ ಪಡೆದಿರುವ ರೀತಿಯ ಬಗ್ಗೆ ಪ್ರಶ್ನಿಸಿರುವ ಪೀಠವು, ಗಂಭೀರ ಅಪರಾಧ ಪ್ರಕರಣಗಳಲ್ಲೂ ಪೊಲೀಸರು ವರ್ಷಗಟ್ಟಲೇ ಆರೋಪಿಗಳನ್ನು ಬಂಧಿಸಲ್ಲ. ರವಿ ಅವರನ್ನು ವಶಕ್ಕೆ ಪಡೆದಿರುವ ರೀತಿ, ಅವರು ಗಾಯಗೊಂಡಿರುವ ಘಟನೆ ಬಗ್ಗೆ ಕೇಳಿದೆ. ಅಲ್ಲದೇ ದೂರುದಾರರು ಮತ್ತು ಅರ್ಜಿದಾರರು ಇಬ್ಬರೂ ಜನಪ್ರತಿನಿಧಿಗಳು. ದುರದೃಷ್ಟಕರ ಬೆಳವಣಿಗೆ ಎಂದರೆ ಅವರಿಬ್ಬರೂ ನಮ್ಮ ನಾಯಕರು. ಹೇಗೆ ನಡೆದುಕೊಳ್ಳಬೇಕು ಗೊತ್ತಿರಬೇಕು ಎಂದೂ ಪೀಠ ಒತ್ತಿ ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ