
ಪರಿಹಾರ ಕೇಂದ್ರ: ಶಾಲೆಗಳಿಗೆ 20 ರವರೆಗೆ ರಜೆ ವಿಸ್ತರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹ ಇಳಿಮುಖವಾಗುತ್ತಿದೆ. ಪ್ರಮುಖ ನದಿ ದಂಡೆಯಲ್ಲಿರುವ ಗ್ರಾಮಗಳನ್ನು ಹೊರತುಪಡಿಸಿ ಇತರ ಗ್ರಾಮಗಳು ಪ್ರವಾಹದಿಂದ ಮುಕ್ತವಾಗಿವೆ.
ಪ್ರವಾಹ ಬಂದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಪರಿಹಾರ ಸಕೇಂದ್ರ ತೆರೆದು ಅಲ್ಲಿ ಆಶ್ರಯ ನೀಡಲಾಗಿದೆ. ಸಮುದಾಯ ಭವನ, ಶಾಲೆಗಳನ್ನು ಪರಿಹಾರ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಪ್ರವಾಹ ಇಳಿದರೂ ಜನರು ಹಲವೆಡೆ ಮನೆಗಳಿಗೆ ಸ್ಥಳಾಂತರವಾಗುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಇನ್ನೂ ಪರಿಹಾರ ಕೇಂದ್ರಗಳು ಮುಂದುವರಿದಿವೆ.
ಶಾಲೆಗಳಲ್ಲಿ ಪರಿಹಾರ ಕೇಂದ್ರಗಳು ಇದ್ದಲ್ಲಿ ಅಂತಹ ಕಡೆ ಶಾಲೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಪರಿಹಾರ ಕೇಂದ್ರಗಳಿರುವ ಶಾಲೆಗಳಿಗೆ ರಜೆಯನ್ನು ವಿಸ್ತರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರಿಹಾರ ಕೇಂದ್ರ ಗಳಾಗಿ ಉಪಯೋಗಿಸುತ್ತಿರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಅಗಸ್ಟ್ ೧೬ ರಿಂದ ೨೦ರ ವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಎಸ್. ಬಿ. ಬೊಮ್ಮನಹಳ್ಳಿ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಬದಲಿಗೆ ಮುಂಬರುವ ಅಕ್ಟೋಬರ್ ತಿಂಗಳ ಮಧ್ಯಂತರ ರಜೆಯಲ್ಲಿ ಶಾಲೆಗಳನ್ನು ನಡೆಸಿ ಶಾಲಾ ಬೋಧನಾ ಕಲಿಕಾ ಅವಧಿಯನ್ನು ಸರಿದೂಗಿಸಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ